ಗದಗ: ಗೌರಿ-ಗಣೇಶ ಹಬ್ಬವೆಂದರೆ ಹಳ್ಳಿಯಿಂದ ಹಿಡಿದು ಪಟ್ಟಣ, ನಗರಗಳಲ್ಲೂ ಭಾರಿ ಸಂಭ್ರಮ -ಸಡಗರವಿರುತ್ತೆ. ದೇಶ, ವಿದೇಶಗಳಲ್ಲೂ ವಿನಾಯಕ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ, ಈ ಸಲ ಆ ಉತ್ಸಾಹಕ್ಕೆ ಕೊರೊನಾ ಸೋಂಕು ಅಡ್ಡಗಾಲಾಗಿದೆ. ಇದರಿಂದಾಗಿ ಆರು ತಿಂಗಳಿಗೆ ಮುನ್ನವೇ ವಿಗ್ರಹಗಳನ್ನು ಸಜ್ಜುಗೊಳಿಸಿ ಒಂದಷ್ಟು ಹಣ ಸಂಪಾದಿಸುತ್ತಿದ್ದ ಮೂರ್ತಿ ತಯಾರಕರ ಜೀವನ ತೊಂದರೆಗೆ ಸಿಲುಕಿದೆ.
'ಮುದ್ರಣ ಕಾಶಿ' ಎಂದೇ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ, ಪ್ರವಾಹದ ಭೀತಿ ಗ್ರಾಮೀಣ ಪ್ರದೇಶದ ಜನರನ್ನು ಕಂಗೆಡಿಸಿದೆ. ಇದರ ಜೊತೆಗೆ, ಸಾಮೂಹಿಕವಾಗಿ 'ಗಣನಾಥ'ನ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ತಯಾರಕರು ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ತಯಾರಿಕೆಯಲ್ಲಿ ತೊಡಗಿದ್ದು, ಬೇಡಿಕೆ ಕೊರತೆಯ ಆತಂಕದಲ್ಲಿ ದೊಡ್ಡ 'ಪ್ರಥಮ ಪೂಜಕ'ನ ಮೂರ್ತಿಗಳ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಹಜವಾಗಿಯೇ ಮೂರ್ತಿ ತಯಾರಿಕೆಯನ್ನೇ ನಂಬಿರುವ ನೂರಾರು ಕಾರ್ಮಿಕರ ಆದಾಯಕ್ಕೂ ಕತ್ತರಿ ಬಿದ್ದಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಪ್ರತಿವರ್ಷ 150 ಸಾರ್ವಜನಿಕ, 20 ಸಾವಿರ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ಸೇರಿ ಜಿಲ್ಲೆಯಲ್ಲಿ ಒಟ್ಟು ಮೂರುವರೆ ಲಕ್ಷ 'ಏಕದಂತ'ನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಪ್ರತಿವರ್ಷ ಐದು ತಿಂಗಳ ಮುನ್ನವೇ ಮಣ್ಣಿನಿಂದ 'ಲಂಬೋಧರ'ನ ಮೂರ್ತಿ ತಯಾರಿಕೆ ಆರಂಭಿಸಲಾಗುತ್ತೆ. ನಗರದ ಕಾಗದಗೇರಿ, ಟ್ಯಾಗೋರ ರಸ್ತೆ, ಗಂಜಿ ಬಸವೇಶ್ವರ ವೃತ್ತ, ಸುಣ್ಣದ ಬಟ್ಟಿ, ರಾಚೋಟೇಶ್ವರ ದೇವಸ್ಥಾನ, ಹುಡ್ಕೋ ಕಾಲನಿ ಹೀಗೆ 350ಕ್ಕೂ ಹೆಚ್ಚು ಕುಟುಂಬಗಳು ವಂಶಪಾರಂಪರಿಕವಾಗಿ ಜೇಡಿಮಣ್ಣಿನ ಮೂರ್ತಿಗಳ ತಯಾರಿಕೆ ಮಾಡಿಕೊಂಡು ಬಂದಿವೆ.
ಮೂರ್ತಿಗಳ ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ತಿಂಗಳ ಮುನ್ನವೇ ಶೇ. 50ರಷ್ಟು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿತ್ತು. ಆದರೆ, ಕೊರೊನಾ ಇದೆಲ್ಲದಕ್ಕೂ ಕಡಿವಾಣ ಹಾಕಿದೆ. ಪರಿಣಾಮ, ಮೂರ್ತಿ ತಯಾರಕರ ಬಾಳಲ್ಲಿ ಕರಿನೆರಳು ಆವರಿಸಿದೆ.
'ಗಜಾನನ' ಪೂಜೆಗೆ ಕೊರೊನಾ ಹಾಗೂ ಪ್ರಕೃತಿ ವಿಕೋಪಗಳು ಬಹುದೊಡ್ಡ ವಿಘ್ನ ತಂದೊಡ್ಡಿವೆ.