ಗದಗ: ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಶಂಕಿತ ವ್ಯಕ್ತಿಯನ್ನು ದಾಖಲಿಸಲಾಗಿದ್ದು, 15 ದಿನಗಳ ಕಾಲ ಆತನ ಮೇಲೆ ಆರೋಗ್ಯ ಇಲಾಖೆಯಿಂದ ನಿಗಾ ಇಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮೂಲದ 21 ವರ್ಷದ ಯುವಕನಿಗೆ ಕೊರೊನಾ ಇರಬಹುದೆಂದು ಶಂಕಿಸಲಾಗಿದೆ. ಶಂಕಿತ ವ್ಯಕ್ತಿ ಕಲಬುರಗಿಯಿಂದ ಗದಗಕ್ಕೆ ಬಂದಿದ್ದು, ಕೊರೊನಾ ಭೀತಿಯಿಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾನೆ. ಈ ಯುವಕ ಕಲಬುರಗಿ ರೈಲು ನಿಲ್ದಾಣದಲ್ಲಿ ಕೆಲಸ ಮಾಡ್ತಿದ್ದ. ಆತನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೊರೊನಾ ವೈರಸ್ನ ಕೆಲ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆ ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
ಇನ್ನು, ಈಗಾಗಲೇ ಯುವಕನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊರೊನಾ ವಾರ್ಡ್ ಸಿದ್ಧಗೊಳಿಸಿದ್ದು, ಅಲ್ಲಿಗೆ ಆತನನ್ನ ಶಿಫ್ಟ್ ಮಾಡಲಾಗಿದೆ. ಜೊತೆಗೆ ವೈದ್ಯರು ಕೊರೊನಾ ವೈರಸ್ ತಪಾಸಣೆ ನಡೆಸುತ್ತಿದ್ದಾರೆ.