ಗದಗ: ಕೊರೊನಾ ಕರಿ ನೆರಳಿನಲ್ಲಿ ನಾಳೆಯಿಂದ ರಾಜ್ಯಾಂದಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಆದರೆ, ನಾಳೆ ಪರೀಕ್ಷೆ ಬರಿಯಬೇಕಿದ್ದ ವಿಧ್ಯಾರ್ಥಿಯೋರ್ವನಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢವಾಗಿದೆ. ವಿದ್ಯಾರ್ಥಿಗೆ ಸೋಂಕು ತಗುಲಿರುವ ಬಗ್ಗೆ ನಾಳೆಯ ಹೆಲ್ತ್ ಬುಲೆಟಿನ್ನಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯುವಕ ವಿಜಯಪುರ ಜಿಲ್ಲೆಯಿಂದ ಜೂನ್ 20 ರಂದು ಲಕ್ಷ್ಮೇಶ್ವರ ಪಟ್ಟಣಕ್ಕೆ ಪರೀಕ್ಷೆ ಬರೆಯಲು ಮೂವರು ವಿದ್ಯಾರ್ಥಿಗಳೊಂದಿಗೆ ಕಾರಿನಲ್ಲಿ ಆಗಮಿಸಿದ್ದ. ಲಕ್ಷ್ಮೇಶ್ವರ ಪಟ್ಟಣದ ಮೂಕ ಹಾಗೂ ಕಿವುಡ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ಇವರಾಗಿದ್ದು, ಈ ಮೂವರ ಪೈಕಿ ಓರ್ವ ವಿದ್ಯಾರ್ಥಿಗೆ ಮಾತ್ರ ಕರೊನಾ ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆ ತಪಾಸಣೆಗೆ ಒಳಪಡಿಸಿದಾಗ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ. ಹಾಗಾಗಿ ಈ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲ. ಬದಲಾಗಿ ಇನ್ನೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ವಸತಿ ಶಾಲೆಯಲ್ಲಿ ಈತನ ಸಂಪರ್ಕದಲ್ಲಿದ್ದ ಓರ್ವ ಶಿಕ್ಷಕ ಸೇರಿದಂತೆ ಸುಮಾರು 19 ವಿದ್ಯಾರ್ಥಿಗಳನ್ನು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಇವರಿಗೆ ನೆಗಟಿವ್ ಬಂದರೆ ಮಾತ್ರ ಇನ್ನೊಂದು ಕೊಠಡಿಯಲ್ಲಿ ಪರೀಕ್ಷೆ ಬರೆಯಿಸಲಾಗುವುದು. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಯಾವುದೇ ಭಯ ಪಡುವ ಅಗತ್ಯವಿಲ್ಲ. ಧೈರ್ಯವಾಗಿ ಪರೀಕ್ಷೆ ಬರೆಯಬಹುದು ಎಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬರವಸೆ ನೀಡಿದ್ದಾರೆ.