ಗದಗ: ಕೊರೊನಾದಿಂದ ಅದೆಷ್ಟೋ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಕಲಿತ ವಿದ್ಯೆಗೆ ತಕ್ಕ ಕೆಲಸವನ್ನು ಕೊರೊನಾ ಕಿತ್ತುಕೊಂಡಿದೆ. ಹೀಗಾಗಿ ಯುವಕರು ಕೈಯಲ್ಲಿ ಗುದ್ದಲಿ, ಸಲಕೆ ಹಿಡಿದು ಕೆಲಸ ಮಾಡ್ತಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಪದವೀಧರರು ನರೇಗಾ ಕೂಲಿ ಕಾರ್ಮಿಕರಾಗಿ ಹೊಲಗಳಲ್ಲಿ ಬದು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಕುರಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಲೇರಿ, ನಾಗರಾಳ ಹಾಗೂ ಕುರಡಗಿ ಗ್ರಾಮಗಳ ಅಂದಾಜು 250ಕ್ಕೂ ಹೆಚ್ಚು ಪದವೀಧರರು ತಮ್ಮ ವಿದ್ಯೆಗೆ ತಕ್ಕ ಕೆಲಸ ಹುಡುಕಿಕೊಂಡು ಜೀವನ ನಡೆಸುತ್ತಿದ್ರು. ಆದರೆ ಕೊರೊನಾ ಎಫೆಕ್ಟ್ನಿಂದ ಕೆಲಸ ಕಳೆದುಕೊಂಡು ಅವರೆಲ್ಲಾ ಈಗ ನರೇಗಾ ಯೋಜನೆಯಡಿ ಕೂಲಿ ಮಾಡ್ತಿದ್ದಾರೆ.
ಬೆಂಗಳೂರು, ಮುಂಬೈ, ಗೋವಾ ಸೇರಿದಂತೆ ಹಲವೆಡೆ ತಮ್ಮ ವಿದ್ಯೆಗೆ ತಕ್ಕಂತೆ ಕೆಲಸ ಮಾಡ್ತಿದ್ರು. ಲಾಕ್ಡೌನ್ನಿಂದಾಗಿ ಕೆಲಸ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದ್ದು, ಮನೆಯಲ್ಲೇ ಕುಳಿತರೆ ಬದುಕು ಸಾಗೋದಿಲ್ಲ ಎಂದು ಅನಿವಾರ್ಯವಾಗಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ.
ಕುರಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1,500ಕ್ಕೂ ಹೆಚ್ಚು ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲಾಗುತ್ತಿದೆ. ಈ ಪೈಕಿ 250 ಜನರು ಪದವೀಧರರು, ಐಟಿಐ, ಟ್ಯಾಕ್ಸಿ ಚಾಲಕರಾಗಿದ್ದಾರೆ. ಎಲ್ಲರಿಗೂ ಉದ್ಯೋಗ ಕಲ್ಪಿಸಿ ನಿತ್ಯ 270 ರೂಪಾಯಿ ಕೂಲಿ ಹಣವನ್ನು ನೀಡಲಾಗುತ್ತಿದೆ. ವಿದ್ಯಾವಂತ ಯುವಕರೂ ಸಹ ಯಾವುದೇ ಅಹಂ ಇಲ್ಲದೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.