ಗದಗ: ಜಿಲ್ಲೆಯ ಏಳು ತಾಲೂಕುಗಳ 15ಕ್ಕೂ ಹೆಚ್ಚು ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಅವಶ್ಯಕತೆ ಇದ್ದವರಿಗೆ ಮಾತ್ರ ಪ್ರವೇಶ ಎಂದು ಬೋರ್ಡ್ ಹಾಕಲಾಗಿದೆ. ಠಾಣೆ ಮುಂಭಾಗದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಠಾಣೆಗೆ ಬರುವವರಿಗೆ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರದ ಮೂಲಕ ಠಾಣೆಯ ಚಟುವಟಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಗೆ ಕೊರೊನಾ ಭಯ ಶುರುವಾಗಿದ್ದು, ಇದೇ ತಿಂಗಳ 17 ರಂದು ಕೊಡಗು ಜಿಲ್ಲೆಯ ಶನಿವಾರಸಂತೆಯಿಂದ ವ್ಯಕ್ತಿಯೊಬ್ಬ ಖಾಸಗಿ ಕೆಲಸದ ನಿಮಿತ್ತ ಮುಂಡರಗಿ ಠಾಣೆಗೆ ಭೇಟಿ ನೀಡಿದ್ದನಂತೆ. ಅಲ್ಲದೇ ಇಲ್ಲಿಯ ಕೆಲವು ಸಿಬ್ಬಂದಿ ಜೊತೆಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದ ಎನ್ನಲಾಗಿದೆ. ನಂತರ ಆ ವ್ಯಕ್ತಿಗೆ (ಪಿ-9215) ಸೋಂಕು ದೃಢವಾಗಿದ್ದು, ಠಾಣಾ ಸಿಬ್ಬಂದಿಯನ್ನು ತಲ್ಲಣಗೊಳಿಸಿದೆ.
ಹೀಗಾಗಿ ವ್ಯಕ್ತಿ ಜೊತೆಗೆ ಸಂಪರ್ಕ ಇದ್ದವರ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆ ಒಳಗೆ ಸಾರ್ವಜನಿಕರ ಪ್ರವೇಶ ನಿಷೇಧವಾಗಿದ್ದು, ಠಾಣೆಯ ಹೊರಗೆ ಸಾರ್ವಜನಿಕರ ಕೆಲಸ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಜನತೆಯ ರಕ್ಷಣಾ ಕಾರ್ಯ ಎಷ್ಟು ಅವಶ್ಯವೋ ನಮ್ಮ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಕಾಳಜಿಯೂ ಸಹ ನಮಗೆ ಮುಖ್ಯವಾಗಿದೆ ಅಂತಾರೆ ಎಸ್ಪಿ ಎನ್.ಯತೀಶ್.