ಗದಗ: ಬಜರಂಗದಳ ನಿಷೇಧಿಸಬೇಕೆಂದರೆ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿ, ಬಜರಂಗದಳ ನಿಷೇಧ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ಮಾತನಾಡಿದ ಅವರು, ಬಜರಂಗದಳ ಬ್ಯಾನ್ ಮಾಡೋ ಪ್ರಶ್ನೆಯೇ ಇಲ್ಲ. ಹಾಗೆಯೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಸಾಮಾಜಿಕ, ಧಾರ್ಮಿಕವಾಗಿ ಕೆಲಸ ಮಾಡುವ ಸಂಘ ಅದು. ಪಿಎಫ್ಐ ದೇಶವಿರೋಧಿ ಕೆಲಸ ಮಾಡಿದೆ. ಭಯೋತ್ಪಾದಕ ಕೆಲಸದಲ್ಲಿ ತೊಡಗಿದೆ. ಅವರ ಮೇಲೆ ಸಾಕಷ್ಟು ಕೇಸ್ಗಳಿವೆ, ಪುರಾವೆಗಳೂ ಇವೆ. ಅದನ್ನು ಬಜರಂಗದಳಕ್ಕೆ ಹೊಲಿಸುವುದು ಸರಿಯಲ್ಲ ಎಂದರು.
ನಾವು ಮಾಡಿದ್ದನ್ನು ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಕುಡಿಯುವ ನೀರು ಕೋಡುತ್ತೇವೆ ಅಂತಾ ಹೇಳಿದ್ದಾರೆ. ನಾವು ನೀರು ಕೊಟ್ಟಿದ್ದೇವೆ. ಹೆಣ್ಣು ಮಕ್ಕಳಿಗೆ ಪಾಸ್ ಕೊಡ್ತೇವೆ ಅಂತಾರೆ. ನಾವು ಆಗಲೇ ಕೊಟ್ಟಿದ್ದೇವೆ. ಅವರು ಹೇಳಿದ್ದರಲ್ಲಿ 75 ಯೂನಿಟ್ ವಿದ್ಯುತ್ ನೀಡಿದ್ದೇವೆ. ಇನ್ನು ಬಜರಂಗದಳ ಬ್ಯಾನ್ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ನಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್ ಕಟ್ ಆ್ಯಂಡ್ ಪೇಸ್ಟ್ ಮಾಡಿದೆ ಎಂದು ಸಿಎಂ ವ್ಯಂಗ್ಯವಾಡಿದರು.
ಆರ್ಎಸ್ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಇಲ್ಲ ಎನ್ನುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾರಾದರೂ ಬಂದು ನೋಡಿದ್ದಾರಾ ಎಂದು ಪ್ರಶ್ನಿಸಿದರು. ವಿಶೇಷ ಹೆಲಿಕಾಪ್ಟರ್ ಮೂಲಕ ಶಿರಹಟ್ಟಿ ಪಟ್ಟಣಕ್ಕೆ ಆಗಮಿಸಿದ ಬೊಮ್ಮಾಯಿ, ಇದಕ್ಕೂ ಮುನ್ನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಪರ ರೋಡ್ ಶೋ ಮಾಡಿ ಮತ ಯಾಚಿಸಿದರು. ಬಳಿಕ ಶಿರಹಟ್ಟಿಯಲ್ಲಿನ ಫಕೀರ್ ದಿಂಗಾಲೇಶ್ವರ ಮಠಕ್ಕೆ ಭೇಟಿ ನೀಡಿ ಮಠದಲ್ಲಿರುವ ಫಕೀರ್ ದಿಂಗಾಲೇಶ್ವರರ ಜೊತೆಗೆ ಗೌಪ್ಯ ಸಭೆ ನಡೆಸಿದರು. ಅಭ್ಯರ್ಥಿ ಚಂದ್ರು ಲಮಾಣಿ ಹೊರಗಿದ್ದರು.
'ಇಂದಿರಾ ಗಾಂಧಿ ಕಾಲದಿಂದಲೂ ಹೇಳ್ತಾ ಇದ್ದಾರೆ': ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಭಜರಂಗದಳ ಹಾಗೂ ಆರ್ಎಸ್ಎಸ್ ಸಂಘಟನೆಯನ್ನು ಇಂದಿರಾ ಗಾಂಧಿ ಕಾಲದಿಂದಲೂ ಬ್ಯಾನ್ ಮಾಡುತ್ತೇವೆ ಅಂತಾ ಹೇಳ್ತಿದ್ದಾರೆ. ಇಂದಿರಾ ಗಾಂಧಿಗೆ ಬ್ಯಾನ್ ಮಾಡಲು ಆಗಿಲ್ಲ, ಇವರೇನ್ ಬ್ಯಾನ್ ಮಾಡ್ತಾರೆ? ಬ್ಯಾನ್ ಮಾಡಿ ಪಿಎಫ್ಐ ಹಾಗೂ ಎಸ್ಡಿಪಿಐಗೆ ಅನುಮತಿ ನೀಡ್ತರಾ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಗ್ಯಾರಂಟಿ ಕಾರ್ಡ್ ಬಿಟ್ಟು ಮತ್ತೆ ಗ್ಯಾರಂಟಿ ಕಾರ್ಡ್ ವಾಪಸ್ ಪಡೆದುಕೊಂಡಿದ್ದಾರೆ. ನಾವು ರಾಜ್ಯ ಸರ್ಕಾರದ ಬಜೆಟ್ ಅನುಗುಣವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ನನ್ನ ಆದಾಯ 10 ರೂಪಾಯಿ ಇರುತ್ತೆ, 100 ರೂ. ಘೋಷಣೆ ಮಾಡಿದ್ರೆ ಹೇಗೆ? ಹಾಗೆಯೇ ಇವರ ಪ್ರಣಾಳಿಕೆ ಇದೆ. ಸಮಾಜದ ಎಲ್ಲ ವರ್ಗ, ಶಿಕ್ಷಣ, ಕೃಷಿ, ಕೈಗಾರಿಕೆಗೆ ಅನುಕೂಲವಾಗುವ ಪ್ರಣಾಳಿಕೆ ನಮ್ಮದು ಎಂದು ಸಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಮಂಡ್ಯ ಅಭ್ಯರ್ಥಿ ಪರ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ : ಕೈ ನಾಯಕಿಗೆ ಸಾವಯವ ಬೆಲ್ಲ, ಕೃಷ್ಣನ ವಿಗ್ರಹ ಗಿಫ್ಟ್