ಗದಗ: ಮಲಪ್ರಭಾ ನದಿಯ ಪ್ರವಾಹದಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು, ಲಖಮಾಪುರ ಗ್ರಾಮಗಳಿಗೆ ಭೇಟಿ ನೀಡಿದ್ದು, ಮಲಪ್ರಭಾ ಪ್ರವಾಹದಿಂದ ಮತ್ತು ಎಡಬಿಡದೆ ಸುರಿದ ಮಳೆಯಿಂದಾಗಿ ಆಗಿರುವ ಹಾನಿಯ ಕುರಿತು ಅಧ್ಯಯನ ಮಾಡಲಿದೆ. ವಿ.ಪಿ.ರಾಜವೇಣಿ ಮತ್ತು ಸದಾನಂದ ಬಾಬು ನೇತೃತ್ವದ ತಂಡದಿಂದ ಅಧ್ಯಯನ ನಡೆಯಲಿದೆ.
ವಿ.ಪಿ ರಾಜವೇಣಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಧೀನ ಕಾರ್ಯದರ್ಶಿ ಮತ್ತು ಸದಾನಂದ ಬಾಬು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಅಭಿಯಂತರರು ಆಗಿರುವ ಈ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಜಿಲ್ಲೆಯಲ್ಲಿ 157 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಗದಗ ಜಿಲ್ಲೆಯ ಸುಮಾರು 30 ಹಳ್ಳಿಗಳಿಗೆ ಈ ಪ್ರವಾಹದ ಬಿಸಿ ತಟ್ಟಿ ಸಾಕಷ್ಟು ಹಾನಿಯಾಗಿತ್ತು. ನೀರು ನುಗ್ಗಿ ಹಲವಾರು ಮನೆಗಳು ಬಿದ್ದಿವೆ. ಜೊತೆಗೆ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.