ಗದಗ : ಉಪ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತಾ ತೋರಿಸಿಕೊಟ್ಟಿದೆಯೆಂದು ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನೇ ರಾಜಾಹುಲಿ ಅಂತಾ ಉದ್ಘರಿಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಿದರು.
ಡಿಕೆ ಸುರೇಶ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದರು. ಎಲ್ಲಾ ಕಡೆ ಜಾತಿಯ ಹೆಸರಲ್ಲಿ ಏನೇನೋ ಪ್ರಯತ್ನ ಮಾಡಿದರು. ಆದ್ರೆ, ಯಾವುದು ಕೂಡ ಪ್ರಯೋಜನವಾಗಲಿಲ್ಲ ಎಂದು ಟೀಕಿಸಿದರು.
ಪ್ರವಾಹದ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ ಬಿಎಸ್ವೈ ಸರ್ಕಾರಕ್ಕೆ ಮತದಾರರು ಜೈ ಎಂದಿದ್ದಾರೆ ಎಂದರು. ಮುಂದಿನ ಎರಡೂವರೆ ವರ್ಷದಲ್ಲಿ ಬಿಎಸ್ವೈ ನೇತೃತ್ವದಲ್ಲಿ ಯಶಸ್ವಿಯಾಗಿ ಸರ್ಕಾರ ಕಾರ್ಯ ನಿರ್ವಹಿಸಲಿದೆ, ಬರುವ ಚುನಾವಣೆಯಲ್ಲಿಯೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು.
ಇನ್ನೂ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಬಿಐ ಅರೆಸ್ಟ್ ವಿಚಾರ ಹೊಸದೇನಲ್ಲ. ಸಿಎಂ ಯಡಿಯೂರಪ್ಪ ಅವರ ಮೇಲೂ ಕೇಸ್ ಆಗಿತ್ತು. ವಿನಯ ಕುಲಕರ್ಣಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಬಿಹಾರ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಬಿಹಾರದ ಜನತೆ ಪ್ರಧಾನಿ ಮೋದಿಜಿ ಹಾಗೂ ಅಮಿತ್ ಶಾ ಅವರ ಮೇಲೆ ವಿಶ್ವಾಸವಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಮೋದಿ, ಅಮಿತ್ ಶಾ, ನಿತೀಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಯಾವುದೇ ಚುನಾವಣೆಯಿರಲಿ, ಯಾರ ಬಗ್ಗೆ ಮಾತನಾಡುತ್ತೇವೆ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಮಾತನಾಡಬೇಕು. ನಾನು ಯಾರನ್ನು ಕೂಡ ಅವಹೇಳನ ಮಾಡುವುದಿಲ್ಲ. ರಾಜಕಾರಣದಲ್ಲಿ ನಾಲಿಗೆ ಮೇಲೆ ಹಿಡಿತ ಇರಬೇಕು. ಸಿಎಂ ಆಗಲು ಯಾರ್ಯಾರೋ ಓಡಾಡಿದರು.
ಸಿದ್ಧರಾಮಯ್ಯ ನಾನೇ ಸಿಎಂ ಅಂದ್ರು, ಡಿಕೆ ಶಿವಕುಮಾರ್ ನಾನು ಸಿಎಂ ಆಗ್ತೀನಿ ಅಂದ್ರು, ಆದ್ರೆ, ಏನಾಯ್ತು? ಅಂತಾ ಪ್ರಶ್ನೆ ಮಾಡಿದರು. ದೇಶದ ಹಲವು ರಾಜ್ಯಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಇದು ಕಾಂಗ್ರೆಸ್ ಮುಕ್ತ ಭಾರತದ ಕಲ್ಪನೆಯನ್ನು ತೋರಿಸಿ ಕೊಡುತ್ತದೆಯೆಂದು ಹೇಳಿದರು.