ಗದಗ : ಐವರು ಸೇರಿಕೊಂಡು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ನಡೆದಿದೆ. ಅಸೂಟಿ ಗ್ರಾಮದ ಶಿವವ್ವ ಮತ್ತು ಈರನಗೌಡ ಕುಲಕರ್ಣಿ ಹಲ್ಲೆಗೊಳಗಾದ ದಂಪತಿ. ಅಂತರ್ಜಾತಿಯ ವಿವಾಹವೇ ಹಲ್ಲೆ ನಡೆಸಲು ಕಾರಣ ಎಂದು ಹೇಳಲಾಗ್ತಿದೆ.
ಘಟನೆಯ ಹಿನ್ನೆಲೆ : ಜುಲೈ 8ರಂದು ಸಂಜೆ 6:45 ರ ಸುಮಾರಿಗೆ ಹಲ್ಲೆಗೊಳಗಾದ ಶಿವವ್ವ ಮತ್ತು ಆಕೆಯ ಗಂಡ ಈರನಗೌಡ ಕುಲಕರ್ಣಿ ಮನೆಯಲ್ಲಿದ್ದಾಗ, ಬಸನಗೌಡ ಕುಲಕರ್ಣಿ ಎಂಬ ವ್ಯಕ್ತಿ ಇವರ ಮನೆಯ ಬಾಗಿಲಿಗೆ ಬಂದು ಮೂತ್ರ ವಿಸರ್ಜನೆ ಮಾಡಿದ್ದ. ಇದನ್ನು ಪ್ರಶ್ನಿಸಿದ ದಂಪತಿಗೆ ಆರೋಪಿ ಬಸನಗೌಡ ಕುಲಕರ್ಣಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಬಳಿಕ ಮಾತಿಗೆ ಮಾತು ಬೆಳೆದು, ಸಹನೆ ಕಳೆದುಕೊಂಡ ಬಸನಗೌಡ ಕುಲಕರ್ಣಿ ಮತ್ತು ಆತನ ಸಹೋದರರು ಸೇರಿ ಒಟ್ಟು ಐದು ಮಂದಿ ಶಿವವ್ವ ಮತ್ತು ಈರನಗೌಡ ಕುಲಕರ್ಣಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.
ಅಂತರ್ಜಾತಿ ವಿವಾಹ ಹಲ್ಲೆಗೆ ಕಾರಣ?
ದಂಪತಿ ಮೇಲೆ ಹಲ್ಲೆ ನಡೆಸಲು ಅಂತರ್ಜಾತಿಯ ವಿವಾಹ ಕಾರಣ ಎಂದು ಹೇಳಲಾಗ್ತಿದೆ. ಕಳೆದ 28 ವರ್ಷಗಳ ಹಿಂದೆ ಮೇಲ್ಜಾತಿಯ ಈರನಗೌಡ ಮತ್ತು ಕೆಳಜಾತಿಯ ಶಿವವ್ವ ಪ್ರೀತಿಸಿ ಮದುವೆಯಾಗಿದ್ದರು. ಇದೇ ದ್ವೇಷದಿಂದ ಎರಡು ದಶಕಗಳ ಬಳಿಕ ಅವರ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ.
ಓದಿ : ಪತಿಯ ಕಣ್ಣೆದುರೇ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ: ಖಾಸಗಿ ಭಾಗಗಳಿಗೆ ಬಿಯರ್ ಬಾಟಲಿಯಿಂದ ಹಲ್ಲೆ
ಘಟನೆ ಸಂಬಂಧ ಐವರ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ತಿಳಿದು ಬರಬೇಕಿದೆ.