ಗದಗ: ಪಿಪಿಇ ಕಿಟ್ ಅನ್ನು ಆ್ಯಂಬುಲೆನ್ಸ್ ಚಾಲಕನೊಬ್ಬ ಬೇಲಿಯಲ್ಲಿ ಬಿಸಾಕಿರುವ ಘಟನೆ, ಗದಗದಲ್ಲಿ ನಡೆದಿದೆ. ಮಲ್ಲಸಮುದ್ರದ ಕ್ರಾಸ್ ಬಳಿಯಿರುವ ಗದಗ ಜಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ನ್ನು ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿದ್ದಾನೆ.
ಈ ರೀತಿ ಬೇಕಾ ಬಿಟ್ಟಿಯಾಗಿ ಕಿಟ್ನ್ನು ಬಿಸಾಕಿರೋದ್ರಿಂದ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ಕೋವಿಡ್-19 ಮಾರ್ಗಸೂಚಿ ಅನ್ವಯದಂತೆ ಪಿಪಿಇ ಕಿಟ್ ವಿಲೇವಾರಿ ಮಾಡಬೇಕು. ಆದ್ರೆ ಈ ರೀತಿ ರಸ್ತೆ ಪಕ್ಕದ ಬೇಲಿಯಲ್ಲಿ ಬಿಸಾಕಿದ್ದರಿಂದ ರಸ್ತೆಯಲ್ಲಿ ಓಡಾಡುವ ಜನರಿಗೆ ಭಯ ಶುರುವಾಗಿದೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು, ರೋಗಿಗಳನ್ನು ಆರೈಕೆ ಮಾಡಲು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಕಾರ್ಯವನ್ನು ಇಡೀ ರಾಜ್ಯವೇ ಗೌರವದಿಂದ ಕಾಣ್ತಿದೆ. ಅದರಲ್ಲೂ ವೈದ್ಯರಿಗೆ ಹಾಗೂ ಕೊರೊನಾ ರೋಗಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊರತೆಯಿದೆ ಎನ್ನುವ ಆರೋಪವಿದೆ. ಪಿಪಿಇ ಕಿಟ್ ಸಾಕಾಗ್ತಿಲ್ಲಾ ಎನ್ನುವ ಕೊರಗಿದೆ. ಹೀಗಿರುವಾಗ ಚಾಲಕ ಈ ರೀತಿ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.