ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ನೀರಲಗಿ ದಂಪತಿ, ಗ್ರಾಮದಲ್ಲಿ ಜೀವನ್ ಹೆಸರಿನ ಲೇಔಟ್ ನಿರ್ಮಾಣ ಮಾಡ್ತಿದಾರೆ. ಲೇಔಟ್ನಲ್ಲಿ ಸುಮಾರು 40 ಸೈಟ್ ನಿರ್ಮಿಸಿ, ಬಡವರಿಗೆ ವಸತಿ ರಹಿತರಿಗೆ ಉಚಿತವಾಗಿ ದಾನ ಮಾಡಬೇಕು ಎಂದುಕೊಂಡಿದ್ದಾರೆ. ಈ ಮೂಲಕ ಬಾಲ್ಯದಲ್ಲೇ ಇಹ ಲೋಕ ತ್ಯಜಿಸಿರುವ ಕಂದಮ್ಮ 'ಜೀವನ್' ಹೆಸರನ್ನು ಗ್ರಾಮಸ್ಥರು ಶಾಶ್ವತವಾಗಿ ನೆನಪ್ಪಿಟ್ಟುಕೊಳ್ಳುವಂತೆ ಮಾಡ್ತಿದಾರೆ.
ಅಲ್ಪಾಯುವಾಗಿದ್ದ ಜೀವನ್ 6 ವರ್ಷದವನಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ, ಜೀವನದ ಪಯಣ ಮುಗಿಸಿದ್ದಾನೆ. ದಂಪತಿ ಮದ್ವೆಯಾಗಿ ಎಂಟು ವರ್ಷದ ಬಳಿಕ ಜೀವನ್ ಹುಟ್ಟಿದ್ದ. ಒಂದು ವರ್ಷ ಆರೋಗ್ಯವಾಗಿದ್ದ ಜೀವನ್ ನಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ. 2019 ಡಿಸೆಂಬರ್ 21 ರಂದು ಮೆದುಳು ಜ್ವರದಿಂದ ಮಗು ತೀರಿ ಹೋಗಿದ್ದಾನೆ.
ಸಾಲ ತೀರಿಸಲು ಜಮೀನು ಮಾರಾಟ: ಮಗುವಿನ ಚಿಕಿತ್ಸೆಗೆ ಎಂದು ಮಾಡಿದ್ದ ಸಾಲವನ್ನು ತೀರಿಸಲು ಮೂರು ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಸದ್ಯ ಇರುವ ಐದು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಲೇಔಟ್ ಮಾಡಿ, ದಾನ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಒಂದು ಮಗುವನ್ನು ದತ್ತು ಪಡೆದು ಸಾಕುವುದಕ್ಕಿಂತ, ಕಡು ಬಡವರ ಕನಸಿನ ಮನೆಗೆ ಜಾಗ ಕೊಟ್ಟು ಅವರ ಮಕ್ಕಳಲ್ಲಿ ಜೀವನ ಪ್ರತಿರೂಪ ಕಾಣ್ಬೇಕು ಅನ್ನೋದು ಜ್ಯೋತಿ ಅವರ ಮನಸ್ಸಿನ ಮಾತಾಗಿದೆ.
ಮೂರನೇ ಪುಣ್ಯಸ್ಮರಣೆ: ಡಿಸೆಂಬರ್ 21ರಂದು ಮಗುವಿನ ಮೂರನೇ ಪುಣ್ಯಸ್ಮರಣೆ ಇದೆ. ಆ ದಿನದಂದೆ ಗ್ರಾಮದ ವಸತಿ ರಹಿತ 40 ಕುಟುಂಬಗಳಿಗೆ ನಿವೇಶನ ನೀಡುವ ಯೋಜನೆಯನ್ನು ದ್ಯಾಮಣ್ಣ ಹಾಕಿಕೊಂಡಿದ್ದಾರೆ. ಸರ್ವೆ ನಂಬರ್ 224/1ರಲ್ಲಿ ಎರಡು ಎಕರೆ ಜಾಗ ಇದೆ. ಅದರಲ್ಲಿ 1 ಎಕರೆ ಜಾಗದಲ್ಲಿ 18/30 ವಿಸ್ತೀರ್ಣದ 40 ಸೈಟ್ ನಿರ್ಮಾಣ ಮಾಡೋದಕ್ಕೆ ದ್ಯಾಮಣ್ಣ ಮುಂದಾಗಿದಾರೆ.
ಅರ್ಹರ ಆಯ್ಕೆ: ಸೂರಣಗಿ ಗ್ರಾಮದ 40 ಕಡು ಬಡವರನ್ನು ಆರಿಸಿ ನಿವೇಶನ ಹಂಚುವುದಕ್ಕೆ ಯೋಜನೆ ಮಾಡಲಾಗಿದೆ. ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲೇ ಅರ್ಹರ ಆಯ್ಕೆಯಾಗುತ್ತದೆ. ಉಳಿದಂತೆ ಗ್ರಾಮದ ಮಹಿಳಾ ಸಂಘ, ಯುವಕ ಮಂಡಳ, ದೇವಸ್ಥಾನಕ್ಕೂ ಜಾಗವನ್ನ ಮೀಸಲಿಡಲು ಯೋಚನೆ ನಡೆದಿದೆ. ಒಂದುಕಡೆ ಎನ್ ಎ ಮಾಡಿಸೋದಕ್ಕೆ ತಯಾರಿ ನಡೆದಿದ್ದರೆ, ಮತ್ತೊಂದು ಕಡೆ ನಿವೇಶನ ರಹಿತ ಗ್ರಾಮಸ್ಥರಿಂದ ಅರ್ಜಿ ಪಡೆಯಲಾಗ್ತಿದೆ.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ ಬಡವರಿಗೆ ದಾನ ಮಾಡಿದ ಪರೋಪಕಾರಿ
ಸಾಕಷ್ಟು ಜಾಗ ಇದ್ದರೂ ತುಂಡು ಭೂಮಿಗಾಗಿ ಜಗಳ ಮಾಡುವ ಜನರ ಮಧ್ಯೆ ದ್ಯಾಮಣ್ಣ ಕುಟುಂಬ ಭಿನ್ನವಾಗಿ ನಿಲ್ಲುತ್ತದೆ. ಪದವೀಧರನಾಗಿರುವ ದ್ಯಾಮಣ್ಣ ಅಷ್ಟೇನೂ ಶ್ರೀಮಂತರಲ್ಲ. ಆದರೆ, ಶ್ರೀಮಂತರನ್ನು ಮೀರಿಸುವ ದಾನ ಗುಣ ಅವರಲ್ಲಿ ಬಂದಿದೆ ಅಂತ ಸೂರಣಗಿ ಗ್ರಾಮಸ್ಥ ನಾಗರಾಜ ಕಳ್ಳಿಹಾಳ ಹೇಳಿದ್ದಾರೆ.