ಗದಗ: ಕೋವಿಡ್-19 ಲಾಕ್ಡೌನ್ ಪರಿಸ್ಥಿತಿಯಲ್ಲಿ ಕೆಲವು ಷರತ್ತುಗಳೊಂದಿಗೆ ಜಿಲ್ಲೆಯಲ್ಲಿ ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದೆ ಎಂದು ರಾಜ್ಯ ಗಣಿ, ಭೂ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ ಸಿಇಒ ಡಾ. ಆನಂದ ಕೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ ಎನ್. ಅವರೊಂದಿಗೆ ಸಚಿವ ಸಿ.ಸಿ.ಪಾಟೀಲ ಸಮಾಲೋಚನೆ ನಡೆಸಿ ಗದಗ-ಬೆಟಗೇರಿ ನಗರ ವ್ಯಾಪ್ತಿಯಲ್ಲಿ ಒಟ್ಟಾರೆ ಐದು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ರಂಗನವಾಡ ಹಾಗೂ ಗಂಜಿ ಬಸವೇಶ್ವರ ಪ್ರದೇಶಗಳ ವ್ಯಾಪ್ತಿಯನ್ನು ಜಿಲ್ಲಾಡಳಿತ ನಿರ್ಬಂಧಿತ ಪ್ರದೇಶವೆಂದು ಘೋಷಿಸಿದೆ.
ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನದಲ್ಲಿ ಗದಗ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳಲ್ಲಿ ಷರತ್ತುಬದ್ಧ ವ್ಯಾಪಾರ ವಹಿವಾಟಿಗೆ ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ನಿರ್ಬಂಧಿಸಿರುವ ಬಾರ್, ರೆಸ್ಟೋರೆಂಟ್, ಹೋಟೆಲ್, ಕ್ರೀಡಾ, ಸಾಮಾಜಿಕ ಚಟುವಟಿಕೆ, ಬಟ್ಟೆ ವ್ಯಾಪಾರ, ಕ್ಷೌರಿಕ ಅಂಗಡಿ ಹೊರತುಪಡಿಸಿ ಸಾಮಾನ್ಯ ವ್ಯಾಪಾರಕ್ಕೆ ಅವಕಾಶ ನೀಡಲಾಗುವದು.
ಆದರೆ ಉಳಿದಂತೆ ಎಲ್ಲಾ ವ್ಯಾಪಾರ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ರಾಜ್ಯ ಸರ್ಕಾರ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿತ ಪ್ರಕರಣಗಳಲ್ಲಿ ತಕ್ಷಣ ಸಂಬಂಧಿತ ಸಂಸ್ಥೆ, ವ್ಯಾಪಾರ, ಕೈಗಾರಿಕೆಗಳನ್ನು ಸೀಲ್ ಡೌನ್ ಮಾಡುವುದಾಗಿ ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.