ಗದಗ: ಎನ್ಎ ಫ್ಲ್ಯಾಟ್ ಮಾಡಿಸಿದ್ದ ಜಮೀನಿನ ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಅಕೌಂಟೆಂಟ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತ್ ಪಿಡಿಒ ಸಿದ್ದಪ್ಪ ಡಂಬಳ ಮತ್ತು ಅಕೌಂಟೆಂಟ್ ಪ್ರದೀಪ್ ಕದಮ ಲಂಚಕ್ಕೆ ಬೇಡಿಕೆ ಇಟ್ಟವರು ಎನ್ನಲಾಗಿದೆ.
ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ನಾಗರಾಜ್ ಹೊಸಮನಿ ಎಂಬುವರು ತಮ್ಮ ಜಮೀನಿನಲ್ಲಿ ಎನ್ಎ ಮಾಡಿಸಿ ಫ್ಟ್ಯಾಟ್ ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ ಜಮೀನಿನ ಉತಾರ ಮಾಡಬೇಕಾದರೆ ಲಂಚ ನೀಡುವಂತೆ ನಾಗರಾಜ್ ಬಳಿ ಬೇಡಿಕೆ ಇಟ್ಟಿದ್ದಾರೆ.
ಮುರುಡಿ ಗ್ರಾಪಂ ವ್ಯಾಪ್ತಿಯ 2 ಎಕರೆ ಜಮೀನಿನಲ್ಲಿ ಸುಮಾರು 41 ಫ್ಲ್ಯಾಟ್ ಮಾಡಿಸಿ ಮಾರಾಟಕ್ಕೆ ಮುಂದಾಗಿದ್ದರು. ಹೀಗಾಗಿ ಒಂದು ಫ್ಲ್ಯಾಟ್ಗೆ ತಲಾ 1000 ರೂ.ನಂತೆ ಒಟ್ಟು 41 ಫ್ಲ್ಯಾಟ್ಗಳಿಗೆ ಸುಮಾರು 41 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರಂತೆ.
ಇಂದು ಮುಂಡರಗಿ ಪಟ್ಟಣದ ಅಕೌಂಟೆಂಟ್ ಮನೆಯಲ್ಲಿ ಲಂಚ ಪಡೆಯುತ್ತಿರುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಪಿಡಿಒ, ಅಕೌಂಟೆಂಟ್ನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.