ಗದಗ: ಅಸ್ಪೃಶ್ಯತೆ ನಿವಾರಣೆ ಹಿನ್ನಲೆ ಜಾಗೃತಿ ಮೂಡಿಸುವ ಸಲುವಾಗಿ ದಲಿತರು ಕುಡಿದ ಚಹಾ ಗ್ಲಾಸ್ ತೊಳೆದ ಮುಂಡರಗಿ ತಹಶೀಲ್ದಾರ್ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ ಅವರು ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಿದ್ದರು. ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿರುವ ವಿಷಯ ಗಮನಿಸಿದ ಅವರು ನಿನ್ನೆ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಸವರ್ಣಿಯರಿಗೆ ತಿಳಿವಳಿಕೆ ನೀಡಿದರು.
ಗ್ರಾಮದಲ್ಲಿ ದಲಿತರಿಗೆ ಚಹಾ ಅಂಗಡಿ ಹಾಗೂ ಕ್ಷೌರ ನಿಷೇಧ ಇತ್ತು. ದಲಿತರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಚಹಾ ಅಂಗಡಿ ಬಂದ್ ಮಾಡಲಾಗುತ್ತಿತ್ತು. ಹಾಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಜಾಗೃತಿ ಸಭೆ ನಡೆಸಿದ್ದ ತಹಶೀಲ್ದಾರ್, ದಲಿತರು ಹಾಗೂ ಗ್ರಾಮದ ಹಿರಿಯರೊಂದಿಗೆ ಚಹಾದ ಅಂಗಡಿಗೆ ಹೋಗಿ ಜಾಗೃತಿ ಮೂಡಿಸಿದರು. ಜೊತೆಗೆ ದಲಿತರು ಕುಡಿದ ಚಹಾದ ಕಪ್ಪು ತೊಳೆದು ಜಾಗೃತಿ ಮೂಡಿಸಿ ಮಾದರಿಯಾದರು. ಇನ್ನು ತಹಶೀಲ್ದಾರ್ ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.