ಗದಗ: ಆತ ಉಂಡ ಮನೆಗೆ ಜಂತಿ ಎಣಿಸುವ ಆಸಾಮಿ. ತಮ್ಮ ಅಂತ ನಂಬಿದ್ದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ದೋಚಿಕೊಂಡು ಓಡಿ ಹೋಗಿದ್ದ. ಹಣ ದೋಚಿಕೊಂಡು ಹೋದವನು ರಾಜಸ್ಥಾನದಲ್ಲಿನ ತನ್ನ ಪ್ರಿಯತಮೆಯೊಂದಿಗೆ ಐಷಾರಾಮಿಯಾಗಿ ಕಾಲ ಕಳೆಯುತ್ತಿದ್ದ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎನ್ನುವಂತೆ ಆ ಕಿಲಾಡಿ ಅಸಾಮಿಯನ್ನು ಗದಗ ಪೊಲೀಸರು ಅಂದರ್ ಮಾಡಿದ್ದಾರೆ.
ರಾಮಸಿಂಗ್ ನಗರದ ಜೈನ್ ಟ್ರೇಡರ್ಸ್ ಹೋಲ್ ಸೇಲ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡ್ತಾಯಿದ್ದ. ಈತನನ್ನು ಮಾಲೀಕ ವಿಕಾಸ್ ತನ್ನ ತಮ್ಮನಂತೆ ನೋಡಿಕೊಂಡಿದ್ದರು. ರಾಮಸಿಂಗ್ಗೆ ಮಾಲೀಕನ ಮನೆಯಲ್ಲಿಯೇ ಊಟ, ವಾಸ ಸೇರಿದಂತೆ ಎಲ್ಲ ಸೌಲ್ಯಭ್ಯ ಇತ್ತು.
ಹೀಗೆ ಎಲ್ಲವೂ ಚೆನ್ನಾಗಿ ಇತ್ತು ಅನ್ನುವಷ್ಟರಲ್ಲಿಯೇ ಮಾಲೀಕನಿಗೆ ತನ್ನ ಒಳಗಿನ ರೂಪ ತೋರಿಸಿಬಿಟ್ಟಿದ್ದ. ಜನವರಿ 19 ರಂದು ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ 7 ಲಕ್ಷ ರೂಪಾಯಿ ಹಣ ಹಾಗೂ ಬೈಕ್ ಕೊಟ್ಟು ಏಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಕಳುಹಿಸಿದ್ದರು. ಆದ್ರೆ ಈ ನಯವಂಚಕ ರಾಮಸಿಂಗ್, ಏಳು ಲಕ್ಷ ರೂಪಾಯಿ ಹಾಗೂ ಬೈಕ್ ಸಮೇತ ನಾಪತ್ತೆಯಾಗಿದ್ದ. ಆದ್ರೆ, ಪೊಲೀಸರು ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂಪಾಯಿ ಹಣದೊಂದಿಗೆ ರಾಮಸಿಂಗನನ್ನು ಆರೆಸ್ಟ್ ಮಾಡಿದ್ದಾರೆ.
ರಾಮಸಿಂಗ್ ಆ ಕದ್ದ ಹಣವನ್ನೆಲ್ಲಾ ತನ್ನ ಪ್ರೇಯಸಿಯೊಂದಿಗೆ ಕಾಲ ಕಳೆಯಲು ಬಳಿಸಿಕೊಳ್ಳುವ ತೀರ್ಮಾನ ಮಾಡಿದ್ದ. ಆಗಲೇ ಆತ ರಾಜಸ್ಥಾನಕ್ಕೆ ಹೋಗಿ ತನ್ನ ಹುಡುಗಿಯನ್ನ ಕರೆಸಿಕೊಂಡು ಅಲ್ಲಲ್ಲಿ ಸುತ್ತಾಡುತ್ತಾ ಜಾಲಿ ಡೇ ಕಳೆಯುತ್ತಿದ್ದ.
ಪೊಲೀಸರು ರಾಮಸಿಂಗ್ನ ಕಾಲ್ ಡಿಟೇಲ್ಸ್ ಪಡೆದು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದರು. ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಕಂಡ ಆರೋಪಿ ರಾಮಸಿಂಗ್ನನ್ನು ವಶಕ್ಕೆ ಪಡೆದ ಪೊಲೀಸರು ಗದಗದ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಹಣವನ್ನು ಕಳೆದುಕೊಂಡ ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ ಕೂಡಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತಿಯಾದ ನಂಬಿಕೆಯಿಂದ ನನಗೆ ಭಾರಿ ಮೋಸವಾಗಿತ್ತು. ಆದರೆ, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ, ನನಗೆ ಹಣ ವಾಪಸ್ ಕೊಡಿಸಿದಕ್ಕೆ ಕೃತಜ್ಞತೆ ಎಂದು ತಿಳಿಸಿದ್ದಾರೆ.
ಇತ್ತ ಮಾಲೀಕರ ವಿಶ್ವಾಸವನ್ನು ಕಳೆದುಕೊಂಡ. ಅತ್ತ ಪ್ರಿಯತಮೆನೂ ಇಲ್ಲ. ಮಾಡಿದ್ದುಣ್ಣೋ ಮಾರಾಯ ಅನ್ನುವಂತೆ ಈಗ ರಾಮಸಿಂಗ್ ಪ್ರಿಯತಮೆಯೊಂದಿಗೆ ಐಷಾರಾಮಿಯಾಗಿ ಓಡಾಡಲು ಕಳ್ಳ ಮಾರ್ಗ ಅನುಸರಿಸಿದ್ದಕ್ಕೆ ಕಂಬಿ ಎಣಿಸುತ್ತಿದ್ದಾನೆ.