ಗದಗ : ಮಮತೆ ವಾತ್ಸಲ್ಯದ ಮೂರ್ತರೂಪವಾದ ಹೆತ್ತ ತಾಯಿಯ ಅಗಲಿಕೆಯನ್ನು ಭರಿಸಿಕೊಳ್ಳುವ ನಿಟ್ಟಿನಲ್ಲಿ ಪುತ್ರನೊಬ್ಬ ಫೈಬರ್ ಮತ್ತು ಪಂಚಲೋಹದ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡ್ತಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ದೇವಣ್ಣ ಬೆನಕನವಾರಿ ಅವರ ತಾಯಿ ಶಿವಗಂಗಮ್ಮ (90) ವಯೋಸಹಜ ಕಾಯಿಲೆಯಿಂದ ಕಳೆದ ವರ್ಷ ಸಾವನ್ನಪ್ಪಿದ್ದರು.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ದೇವಣ್ಣ ಅವರಿಗೆ ತಾಯಿ ಅಂದ್ರೆ ಪಂಚಪ್ರಾಣ. ಅವರ ತಾಯಿ ತೀರಿದ ಬಳಿಕ ಕೆಲ ದಿನಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮನೆಯಲ್ಲಿ ತಾಯಿ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿರಲಿಲ್ಲ. ಆದರೆ, ಅವರಿಗೆ ಈ ಖಿನ್ನತೆಯಲ್ಲಿ ಹೊಳೆದಿದ್ದು, ತಾಯಿಯ ಮೂರ್ತಿ ಪ್ರತಿಷ್ಠಾಪನೆ ವಿಚಾರ. ಮೇ 31 ರಂದು ತಾಯಿಯ ಮೊದಲ ಪುಣ್ಯಸ್ಮರಣೆಯ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಬೇಕು ಎನ್ನುವ ಹಂಬಲ ಅವರದ್ದಾಗಿತ್ತು.
ಹೀಗಾಗಿ ಬೆಂಗಳೂರಿನ ಮುರಳೀಧರ್ ಆಚಾರ್ಯ ಎಂಬುವರ ಬಳಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ ತಾಯಿಯ ಫೈಬರ್ ಮೂರ್ತಿಯನ್ನು ಮಾಡಿಸಿ, ಸುಮಾರು 95 ಸಾವಿರ ರೂ. ಖರ್ಚು ಮಾಡಿ ಹೊನ್ನಪ್ಪ ಆಚಾರ್ಯ ಎಂಬುವರ ಬಳಿ ಪಂಚಲೋಹದ ಮೂರ್ತಿಯನ್ನು ತಯಾರಿಸಿದ್ದಾರೆ. ಕೊನೆಗೂ ತಾಯಿ ದೈಹಿಕವಾಗಿ ನಮ್ಮ ಜೊತೆಗೆ ಇಲ್ಲ ಎಂಬ ಕೊರಗನ್ನು ನೀಗಿಸಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ದೇವಣ್ಣ ಅವರು ತಾಯಿಗೆ ಹತ್ತನೇ ಮಗ. ಒಟ್ಟು ನಾಲ್ಕು ಗಂಡು ಮಕ್ಕಳು ಮತ್ತು 7 ಹೆಣ್ಣು ಮಕ್ಕಳು. ಇವರ ತಂದೆ ನಿಧನರಾಗಿ ಬಹಳ ವರ್ಷಗಳೇ ಕಳೆದಿವೆ. ಆದರೆ, ತಾಯಿ ಮಾತ್ರ ಇವರಿಗೆ ಎಲ್ಲಾ ರೀತಿಗೂ ನಿರ್ದೇಶಕರಾಗಿದ್ದರು. ಹೀಗಾಗಿ ತಾಯಿಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದ ಉಪನ್ಯಾಸಕ ದೇವಣ್ಣ ಅವರಿಗೆ ತಾಯಿಯ ಅಗಲಿಕೆ ಬಹಳಷ್ಟು ನೋವು ಕೊಟ್ಟಿತ್ತು. ತಾವು ಇರೋವರೆಗೂ ತಮ್ಮ ತಾಯಿ ಇರಬೇಕು ಎಂಬ ಭಾವನೆ ಹಿನ್ನೆಲೆಯಲ್ಲಿ ಈ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ : ತಂದೆ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ: ನಿತ್ಯ ಪೂಜೆ ಸಲ್ಲಿಸಿ ಅಪ್ಪನ ಸ್ಮರಿಸುತ್ತಿರುವ ಪುತ್ರರು