ಗದಗ: ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವಂತೆ ಮೊಹರಂ ಆಚರಿಸಲಾಗುತ್ತದೆ. ಮುಸ್ಲಿಮರ ಹಬ್ಬ ಮೊಹರಂನಲ್ಲಿ ಹಿಂದೂಗಳು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ.
ಹೌದು, ಗಜೇಂದ್ರಗಡ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ ಮುಸ್ಲಿಮರ ತ್ಯಾಗ ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಮುಸ್ಲಿಂ ಹಾಗೂ ಹಿಂದೂ ಧರ್ಮವರು ಕೂಡಿಕೊಂಡು ಆಚರಿಸಿದ್ರು. ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಆದ್ರೆ ಹಾಳಕೇರಿ ಗ್ರಾಮದಲ್ಲಿ ಮಾತ್ರ ಮುಸ್ಲಿಂ ದೇವರಿಗೆ ಹಿಂದೂಗಳು ಲಿಂಗ ದೀಕ್ಷೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಇಲ್ಲಿ ಮುಸ್ಲಿಂ ದೇವರಿಗೆ ಲಿಂಗ ಕಟ್ಟಲಾಗುತ್ತದೆ. ಅಷ್ಟೇ ಅಲ್ಲದೆ, ಭಾವೈಕ್ಯತೆಯ ದೃಷ್ಟಿಯಿಂದ ಮುಸ್ಲಿಂ ದೇವರಿಗೆ ರಾಷ್ಟ್ರ ಧ್ವಜವನ್ನು ಸಹ ಕಟ್ಟಲಾಗುತ್ತದೆ. ಈ ಮೂಲಕ ದೇಶಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ಸವಾಲ್ ಅಥವಾ ಬಿಡ್ ಮೂಲಕ ಇಲ್ಲಿ ದೇವರನ್ನು ಹೊರುವುದು ಇನ್ನೊಂದು ವಿಶೇಷ.
ಪ್ರತಿವರ್ಷ ಇಲ್ಲಿಯ ಮುಸ್ಲಿಂ ದೇವರಿಗೆ ಶ್ರೀ ಅನ್ನದಾನೇಶ್ವರ ಮಠದ ಒಂಬತ್ತು ಲಿಂಗ ಮತ್ತು ರಾಷ್ಟ್ರದ ತ್ರಿವರ್ಣ ಧ್ವಜ ಕಟ್ಟಿ ಉಡಿ ತುಂಬಲಾಗುತ್ತದೆ. ಈ ಆಚರಣೆ ಸುಮಾರು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಸ್ವಾತಂತ್ರ್ಯ ಬಂದಾಗಿನಿಂದ ಈ ದೇವರಿಗೆ ರಾಷ್ಟ್ರಧ್ವಜ ಕಟ್ಟುತ್ತಾ ಬಂದಿದ್ದಾರೆ. ಜೊತೆಗೆ ಮುಸ್ಲಿಂ ದೇವರುಗಳು ಇಲ್ಲಿನ ಮಠಕ್ಕೂ ಸಹ ತೆರಳುತ್ತವೆ. ಹಾಲಕೇರಿಯ ಮಹಾತಪಸ್ವಿ ಶ್ರೀ ಅನ್ನದಾನ ಮಹಾ ಸ್ವಾಮೀಜಿ ಮಠಕ್ಕೆ ಹೋಗಿ ಅಲ್ಲಿನ ಸ್ವಾಮಿಜಿಗಳಿಂದ ಲಿಂಗಧಾರಣೆ ಮಾಡಿಸಿಕೊಳ್ಳುತ್ತವೆ. ಈ ದೇವರಿಗೆ "ಮಹಮದ್ ಅಲಿಫ್" ಅಲಿಯಾಸ್ "ಕತ್ತಿ ದೇವರು" ಎಂದು ಹೆಸರಿದೆ.
ಇನ್ನು ಈ ಬಾರಿ ಈ ಕತ್ತಿ ದೇವರ ಸವಾಲ್ 45 ಸಾವಿರದ 500 ರೂಪಾಯಿಗೆ ಸವಾಲ್ ಆಗಿದೆ. ಶರಣಪ್ಪ ಮಲ್ಲಾಪೂರ ಎಂಬುವರಿಗೆ ಸವಾಲ್ ಆಗಿದ್ದು, ಗ್ರಾಮದಲ್ಲಿ ಇದೊಂದು ವಿಶಿಷ್ಟವಾದ ಮೊಹರಂ ಹಬ್ಬವಾಗಿದೆ. ಈ ಹಬ್ಬದಲ್ಲಿ ಹೆಜ್ಜೆ ಕುಣಿತ, ಹುಲಿವೇಷ ಹಾಗು ಅಳ್ಳೊಳ್ಳಿ ವೇಷಧಾರಿಗಳು ಇಲ್ಲಿ ಗಮನ ಸೆಳೆಯುತ್ತಾರೆ. ಹಿಂದೂ ದೇವರನ್ನು ಯಾವ ರೀತಿ ಪೂಜಿಸುತ್ತಾರೋ ಅದೇ ರೀತಿ ಮುಸ್ಲಿಂ ದೇವರನ್ನು ಪೂಜಿಸೋದು ಇಲ್ಲಿನ ಹಿಂದೂಗಳ ಪದ್ಧತಿ. ಅಲ್ಲದೇ ಈ ಹಬ್ಬದಲ್ಲಿ ಯಾರು ಮಾಂಸಹಾರ ನೈವೇದ್ಯ ಮಾಡುವುದಿಲ್ಲ. ಹೀಗಾಗಿ ಹಾಲಕೇರಿ ಗ್ರಾಮ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಗಮವಾಗಿದೆ ಎಂದ್ರೆ ತಪ್ಪೇನಿಲ್ಲ.