ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ ಹಿಂದೂ ಪರನೂ ಅಲ್ಲ, ಮುಸ್ಲಿಂ ಪರನೂ ಅಲ್ಲ. ಮುತಾಲಿಕ್ ಹೇಳಿದ ತಕ್ಷಣ ಯಾರೂ ಮುಸ್ಲಿಮರ ಬಳಿ ವಸ್ತುಗಳನ್ನು ಖರೀದಿ ಮಾಡೋದೇ ಇಲ್ವಾ?. ನನ್ನ ಜೊತೆ ಬನ್ನಿ ನಾನು ತೋರಿಸ್ತೀನಿ. ಅವರು ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಮಾತಾಡ್ತಾರೆ ಎಂದು ಜಮೀರ್ ಮಹಮ್ಮದ್ ಖಾನ್ ಟೀಕಿಸಿದರು.
ಹಲಾಲ್ ಕಟ್ ಬಗ್ಗೆ ಮಾತಾಡಿದ್ದು ಕೇವಲ ನಾಲ್ಕೈದು ಜನ ಮಾತ್ರ. ಹಿಂದೂಗಳು ನಾನು ಮುಸ್ಲಿಮರ ಬಳಿ ಖರೀದಿ ಮಾಡ್ತೀನಿ ಅಂತಾರೆ. ಆದರೆ ಕೆಲವರು ಮಾತ್ರ ಹಿಂದೂ-ಮುಸ್ಲಿಂ ಅಂತಿದ್ದಾರೆ. ಹಿಂದೂಗಳೇ ಇದನ್ನು ವಿರೋಧ ಮಾಡಿದ್ದಾರೆ. ನಾವು ಹಲಾಲ್ ತಿಂದೇ ತಿಂತೀವಿ ಅಂತಾ ಹಿಂದೂಗಳೇ ಹೇಳಿದ್ದಾರೆ. ನಾವು ಇಲ್ಲಿ ಅಣ್ಣ ತಮ್ಮಂದಿರ ಹಾಗಿದ್ದೇವೆ. ಯಾರೂ ಇದನ್ನು ಬದಲಿಸಲು ಮಾಡೋಕೆ ಆಗಲ್ಲ ಎಂದರು.
ಭಾರತ್ ಜೋಡೋದಿಂದ ಬಿಜೆಪಿಗೆ ಭಯ: ಭಾರತ್ ಜೋಡೋಗೆ ಈ ರೀತಿಯ ಬೆಂಬಲ ಸಿಗುತ್ತೆ ಎಂದು ಬಿಜೆಪಿ ನಿರೀಕ್ಷೆ ಮಾಡಿರಲಿಲ್ಲ. ಇದು ಬಿಜೆಪಿಯವರಿಗೆ ಸಹಿಸೋಕೆ ಆಗುತ್ತಿಲ್ಲ. ಕೇರಳದಲ್ಲಿ ರಾಹುಲ್ ಗಾಂಧಿ ಜೊತೆ 25 ಸಾವಿರ ಜನರಿದ್ದರು. ಇದನ್ನು ನೋಡಿ ಬಿಜೆಪಿಯವರು ಯಾವುದೋ ಯಾತ್ರೆ ಶುರು ಮಾಡಿದ್ದಾರೆ. ಮೊದಲೇ ಯಾಕೆ ಯಾತ್ರೆ ಮಾಡಲಿಲ್ಲ ಎಂದು ಜಮೀರ್ ಪ್ರಶ್ನಿಸಿದರು.
ಕಾಂತಾರ ನಾನೂ ನೋಡ್ತೀನಿ: ಕಾಂತಾರ ಕುರಿತು ಪ್ರತಿಕ್ರಿಯಿಸಿ, ದೈವದ ವಿಚಾರ ನನಗೆ ಗೊತ್ತಿಲ್ಲ. ಬೆಂಗಳೂರಿಗೆ ಹೋದ ನಂತರ ನಾನು ನಿಸಿಮಾ ನೊಡುತ್ತೇನೆ. ತುಂಬಾ ಚೆನ್ನಾಗಿದೆ ಅಂತ ಜನ ಹೇಳುವುದನ್ನು ಕೇಳಿದ್ದೇನೆ ಎಂದರು.
ಸಿದ್ದರಾಮಯ್ಯ ನಮ್ಮ ರಾಜ್ಯಕ್ಕೆ ಬೇಕು: ಐದು ವರ್ಷದ ಆಡಳಿತದಲ್ಲಿ ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮದಿಂದ ಜನ ಅವರನ್ನು ನೆನೆಯುತ್ತಾರೆ. ಬಡವರಿಗೆ ಒಳ್ಳೆದಾಗಬೇಕಾದರೆ ಕಾಂಗ್ರೆಸ್ ಸರ್ಕಾರ ಬೇಕು ಎಂದರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನನ್ನ ಅಭಿಪ್ರಾಯ ನಾನು ಹೇಳ್ತೀನಿ ಎಂದು ಹೇಳಿದರು.
ಇದನ್ನೂ ಓದಿ : ಹಲಾಲ್ ಸರ್ಟಿಫೈಡ್ ದುಡ್ಡು ಭಯೋತ್ಪಾದಕ ಕೃತ್ಯಗಳಿಗೆ ಬಳಕೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ