ಧಾರವಾಡ : ಎಂಎಲ್‌ಸಿ ಚುನಾವಣೆಗೆ ಟಿಕೆಟ್ ಘೋಷಣೆ ಮಾಡುವ ಮೊದಲೇ ಬಿಜೆಪಿ ಅಭ್ಯರ್ಥಿಯಾಗಿ ಪ್ರಚಾರ ಕಚೇರಿಯನ್ನು ಬಸವರಾಜ್ ಹೊರಟ್ಟಿ ಆರಂಭಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೊಡ್ತಾರೆ ಎಂದು ತಿಳಿದುಕೊಂಡಿದ್ದೇನೆ. ನಿನ್ನೆ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿ ನೀವೇ ಅಂತಾ ಮೌಖಿಕವಾಗಿ ಹೇಳಿದ್ದಾರೆ ಎಂದರು.
ಚುನಾವಣೆ ಟೈಟ್ ಇಲ್ಲ. 2010ರಲ್ಲಿ ಹೇಗೆ ಇತ್ತೋ ಹಾಗೆ ಇದೆ. ಚುನಾವಣೆ ಬಂದಾಗ ನಾನು ಟೆನ್ಷನ್‌ನಲ್ಲಿರುತ್ತೇನಷ್ಟೇ.. ಕಳೆದ ಸಲ 3,800 ಮತಗಳಿಂದ ಲೀಡ್ನಲ್ಲಿದ್ದೆ. ಈ ಸಲವೂ ಮಾಮೂಲಿ ಇದೆ. ಚುನಾವಣೆ ಬಗ್ಗೆ ಭಯ ಇಲ್ಲ. ಶಿಕ್ಷಕರೆಲ್ಲಾ ನನ್ನ ಪರವಾಗಿದ್ದಾರೆ. ಸುಮಾರು 10ರಿಂದ 15 ಪ್ರತಿಶತ ವಿರೋಧ ಇದೆ. ಅದು ಮೊದಲಿನಂದಲೂ ಇದ್ದೇ ಇದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದು ಹೇಳಿದರು.
ಮೋಹನ ಲಿಂಬಿಕಾಯಿ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅದು ನನಗೆ ಗೊತ್ತಿಲ್ಲ. ನನ್ನದು ಮಾತ್ರ ನಾ ಹೇಳಬಲ್ಲೆ. ಬೇರೆಯವರದ್ದು ಹೇಗೆ ಹೇಳಲಿ? ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಾ ಹೇಳಿ ಪಕ್ಷಕ್ಕೆ ತಂದಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಯಾಗುವೆನೆಂಬ ನಂಬಿಕೆ ಇದೆ ಎಂದರು.
ಇದನ್ನೂ ಓದಿ: ಮಳೆ ಅನಾಹುತ ಎದುರಿಸಲು ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ
ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೆಂಗೆ ನಡೆದರೂ ಒಂದು ಅಂತಾರೆ. ಅಂತಹ ಪ್ರಸಂಗ ಬರುತ್ತದೆ. ಕೆಲವೊಮ್ಮೆ ಡಿಸೆಂಬರ್‌ನಲ್ಲಿ ಮಳೆ ಬರುತ್ತೆ ಯಾಕೆ ಆಗುತ್ತೆ ಅಂದ್ರೆ ಏನು ಹೇಳಬೇಕು?. ನಾ ಎಲ್ಲೇ ಇದ್ದರೂ ಕಂಫರ್ಟ್ ಆಗಿಯೇ ಇರುತ್ತೇನೆ. ಈಗಷ್ಟೇ ಪಕ್ಷದೊಳಗೆ ಸೇರುತ್ತಿದ್ದೇನೆ.
ಕಂಫರ್ಟ್ ಆಗುತ್ತಾ ಇಲ್ಲ ಎಂದು ಹೇಳುವುದಕ್ಕೆ ಆಗಲ್ಲ. ನಾ ಎಲ್ಲಿಯೇ ಹೋದರೂ ಆಯಾ ನಿಮಯಕ್ಕೆ ಹೊಂದಿಕೊಂಡು ಇರುವೆ. ನಾಳೆ ಬಂದು ನಾಮಪತ್ರ ಸಲ್ಲಿಸುತ್ತೇವೆ. ಮೇ 26ರಂದು ಸಿಎಂ, ಎಲ್ಲ ನಾಯಕರೂ ಬರ್ತಾರೆ. ಹೀಗಾಗಿ, 26ಕ್ಕೆ ನಾಮಪತ್ರ ಇನ್ನೊಮ್ಮೆ ಸಲ್ಲಿಸುತ್ತೇವೆ ಎಂದರು.
ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ : ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ. ಟಿಕೆಟ್ ಹೊರಟ್ಟಿ ಅವರಿಗೆ ಫೈನಲ್ ಆಗುತ್ತೆ ಎಂದು ಸ್ಪಷ್ಟಪಡಿಸಿದರು. ಮೋಹನ್ ಲಿಂಬಿಕಾಯಿ ಮೊದನಿಂದಲೂ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.
ಆದರೆ, ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ. ಟಿಕೆಟ್ ಫೈನಲ್ ಆಗೋದಕ್ಕಿಂತ ಮುಂಚೆ ಬಿಜೆಪಿ ಕಚೇರಿ ಉದ್ಘಾಟನೆ ಯಾಕೆ ಅನ್ನೋ ಪ್ರಶ್ನೆಗೆ, ಚುನಾವಣೆ ಕೆಲಸ ಬಹಳ ಇರುತ್ತೆ. ಹೀಗಾಗಿ, ಕಚೇರಿ ಆರಂಭಿಸಿದ್ದಾರೆ ಎಂದರು.