ಹುಬ್ಬಳ್ಳಿ: ನಾಳೆಯಿಂದ ಫೆಬ್ರವರಿ 3 ರವರೆಗೆ ನಗರದ ರೈಲು ಮೈದಾನದಲ್ಲಿ ಯೋಗ ಚಿಕಿತ್ಸೆ ಹಾಗೂ ಬೃಹತ್ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ನಿಡಿದ ಯೋಗ ಗುರು ಬಾಬಾ ರಾಮದೇವ, ಯೋಗ ಜೀವನದ ಅವಿಭಾಜ್ಯ ಅಂಗವಾಗಿದ್ದು, ಯೋಗ ಮಾಡುವುದರಿಂದ ಮಾರಕ ರೋಗಗಳಿಂದ ಮುಕ್ತಿ ಹೊಂದಬಹುದು. ವೈಚಾರಿಕ ಹಾಗೂ ದೈಹಿಕ ದಾರಿದ್ರ್ಯವನ್ನು ದೂರಮಾಡಲು ಯೋಗ ಸಹಾಯಕ ಎಂದರು.
ಯೋಗ ಪ್ರತಿಯೊಂದು ರೋಗದಿಂದ ಮುಕ್ತಿ ಹೊಂದಲು ಸೂಕ್ತವಾದ ಮಾರ್ಗವಾಗಿದ್ದು, ಯೋಗಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ. ಪ್ರತಿಯೊಬ್ಬರು ಕೂಡ ಯೋಗವನ್ನು ಮಾಡುವ ಮೂಲಕ ರೋಗ ಮುಕ್ತ ಜೀವನ ನಡೆಸಬಹುದು ಎಂದರು.12 ವರ್ಷಗಳ ಹಿಂದೆ ಯೋಗ ಶಿಬಿರ ಮಾಡಲು ಹೇಳಿದ್ದೆ, ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಯೋಗದಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ ಹಾಗೂ ರೋಗ ಮುಕ್ತ ಜೀವನಕ್ಕೆ ಇದೊಂದು ದೊಡ್ಡ ವರದಾನವಾಗಿದೆ ಎಂದರು. ಜನರನ್ನು ರೋಗ ಮುಕ್ತ ಮಾಡಲು ನಾವು ಬಂದಿದ್ದೇವೆ. ಯೋಗದ ಮೂಲಕ ಜನರಿಗೆ ಉಚಿತ ಆರೋಗ್ಯ ನೀಡುತ್ತೇವೆ ಎಂದರು.
ಎಲ್ಲಾ ಜಾತಿ ಧರ್ಮದವರಿಗೆ ನಾವು ಆರೋಗ್ಯ ಭಾಗ್ಯ ನೀಡಿದ್ದೇವೆ. ಕೋಟ್ಯಂತರ ಜನ ನಮ್ಮಿಂದ ಎಲ್ಲವನ್ನೂ ಕಲಿತಿದ್ದಾರೆ. ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಕಾಯಿಲೆ ಹೋಗಿಸಿದ್ದೇವೆ. ಇನ್ನು ವಿಶ್ವದಲ್ಲಿ ಅತಿ ದೊಡ್ಡ ರೋಗಗಳು ಕಡಿಮೆ ಆಮ್ಲಜನಕ ರವಾನೆಯಿಂದ ಬರುತ್ತಿದ್ದು, ಇದಕ್ಕಾಗಿ ವಿದೇಶಿ ವೈದ್ಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದರು.
ಹಿಂಸಾ ಮುಕ್ತ, ರೋಗ ಮುಕ್ತ ಹಾಗೂ ನಶಾ ಮುಕ್ತ ಜೀವನ ನಡೆಸಲು ಯೋಗದಿಂದ ಸಾಧ್ಯ. ಯೋಗಿ ಯಾವತ್ತೂ ಹಿಂಸಾಚಾರಿ ಆಗಲ್ಲ. ಇಂದಿರಾಗಾಂಧಿ ಅವರಿಂದ ಹಿಡಿದು ಪ್ರಧಾನಿ ಮೋದಿಯವರೆಗೂ ಗರೀಬಿ ಹಠಾವೋ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಯೋಗ ಎಲ್ಲವನ್ನೂ ಹೋಗಲಾಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉದ್ಯಮಿ ಆನಂದ್ ಸಂಕೇಶ್ವರ ಹಾಗೂ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವ್ವರಲಾಲ್ ಆರ್ಯ ಇದ್ದರು.