ಹುಬ್ಬಳ್ಳಿ: ಹತ್ತಾರು ವರ್ಷಗಳಿಂದ ಸಂಸಾರ ನಡೆಸುತ್ತಿದ್ದ ಪತಿಯನ್ನು ಬಿಟ್ಟು ಪತ್ನಿ ಸ್ನೇಹಿತನ ಜೊತೆ ಮನೆಯಲ್ಲಿದ್ದ ಒಡವೆ ಸಮೇತ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇದನ್ನು ಕೇಳಲು ಹೋದ ಪತಿಯ ಮೇಲೆ ಪತ್ನಿಯ ಸ್ನೇಹಿತ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿ ನಡೆದಿದೆ.
ಮಹಿಳೆ ಹಾಗೂ ಆತನ ಗಂಡ ವಾಸಿಸುತ್ತಿದ್ದ ಮನೆಯ ಕೆಳಗೆ ಬಾಡಿಗೆ ಮನೆ ಪಡೆದುಕೊಂಡಿದ್ದ ಸನ್ನಿ ಎನ್ನುವ ವ್ಯಕ್ತಿ, ಗಂಡ ಮನೆಯಲ್ಲಿ ಇಲ್ಲದ ವೇಳೆ ಮಹಿಳೆ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಇದು ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಇದನ್ನು ಕಣ್ಣಾರೆ ಕಂಡ ಮಹಿಳೆಯ ಮಾವ ತನ್ನ ಮಗನಿಗೆ ತಿಳಿಸಿದ್ದನಂತೆ. ಇದರಿಂದ ಕೋಪಗೊಂಡ ಗಂಡ ತನ್ನ ಪತ್ನಿಗೆ ಬುದ್ಧಿವಾದ ಹೇಳಿದ್ದನಂತೆ. ಆದರೆ ಮಾತು ಕೇಳದ ಪತ್ನಿ ಮನೆಯಲ್ಲಿದ್ದ ಆಭರಣ ಸಮೇತ ಸನ್ನಿ ಜೊತೆ ಓಡಿ ಹೋಗಿದ್ದಾಳಂತೆ.
ಇನ್ನು ಇದನ್ನು ಕೇಳಲು ಹೋದ ಪತಿ ಮೇಲೆ ಪತ್ನಿ ಪ್ರಿಯಕರ ಸನ್ನಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಸಾಲದು ಅಂತಾ ನಾಯಿಯಿಂದ ಕಚ್ಚಿಸಿ ವಿಕೃತಿ ಮೆರೆದಿದ್ದಾನೆ. ಮಾತ್ರವಲ್ಲ ಜಗಳ ಬಿಡಿಸಲು ಬಂದ ಮಹಿಳೆಯ ಗಂಡನ ಸಹೋದರಿ ಹಾಗೂ ಆಕೆಯ ಗಂಡನ ಮೇಲೂ ನಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಮಹಿಳೆಯ ಗಂಡ ತನ್ನ ಕುಟುಂಬದವರು ಹಾಗೂ ಸ್ಥಳೀಯರ ಸಹಾಯದಿಂದ ಬಚಾವ್ ಆಗಿದ್ದು, ಕಿಮ್ಸ್ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಿಮ್ಸ್ ಆಸ್ಪತ್ರೆಯ ವೈದ್ಯರ ಎಂಎಲ್ಸಿ ಆಧಾರದ ಮೇಲೆ ಕೇಶ್ವಾಪುರ ಠಾಣೆ ಪೊಲೀಸರು ಸನ್ನಿ ಮೇಲೆ ದೂರು ದಾಖಲಿಸಿಕೊಂಡು, ಸನ್ನಿಯ ವಿಚಾರಣೆ ನಡೆಸುತ್ತಿದ್ದಾರೆ.