ಧಾರವಾಡ: ಒಡಿಶಾ ರೈಲು ದುರಂತ ಸಿಬಿಐ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಯಾಕೆ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ? ತಾಂತ್ರಿಕ ದೋಷದಿಂದ ಆಗಿರುವ ದುರಂತ ಅನಿಸುತ್ತಿದೆ. ಆದರೂ ಸಿಬಿಐಗೆ ಕೊಟ್ಟಿದ್ದಾರೆ. ತಮ್ಮದೇನು ತಪ್ಪಿಲ್ಲ ಅಂತಾ ಹೇಳುವ ಪ್ರಯತ್ನ ಇರಬಹುದು ಎಂದರು.
ಇಂದು ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಹ ಒಡಿಶಾದಲ್ಲಿ ಎಂಜಿನಿಯರ್ಗಳನ್ನು ಭೇಟಿಯಾಗಿ ಕೇಳಿದ್ದೇನೆ. ಅವರು ಇದು ಮೇಲ್ನೋಟಕ್ಕೆ ಏನೋ ತಪ್ಪಾದಂತೆ ಕಾಣುತ್ತದೆ ಎಂದಿದ್ದಾರೆ. ಗೂಡ್ಸ್ ವಾಹನದ ಮಾಹಿತಿ ಮುಖ್ಯ ಸ್ಟೇಷನ್‌ಗೆ ಹೋಗಿರಲಿಲ್ಲವಂತೆ. ಈ ಬಗ್ಗೆ ಅಲ್ಲಿ ಮಾತುಗಳು ಕೇಳಿ ಬಂದಿವೆ. ಆದರೆ ಯಾಕೆ ಸಿಬಿಐಗೆ ಕೊಟ್ಟಿದಾರೆ, ಏನು ಉದ್ದೇಶ ಗೊತ್ತಿಲ್ಲ ಎಂದು ಹೇಳಿದರು.
ಉಚಿತ ವಿದ್ಯುತ್ ಷರತ್ತು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರು ಅರ್ಹತೆ ಪಡೆದಿರುತ್ತಾರೋ ಅಂಥವರಿಗೆ 12 ತಿಂಗಳ ಅವರೇಜ್ ನೋಡಿ ವಿದ್ಯುತ್ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆ ಮನೆಯಲ್ಲಿ ನೀವೇ ಇರಬಹುದು ಅಥವಾ ಬಾಡಿಗೆ ಕೊಟ್ಟಿರಬಹುದು. 12 ತಿಂಗಳ ವಿದ್ಯುತ್ ಖರ್ಚು ಮಾಡಿದ ಅವರೇಜ್ ಮೇಲೆ 10% ಹೆಚ್ಚು ವಿದ್ಯುತ್ ಕೊಡುತ್ತೇವೆ. ನಿಮ್ಮ ಸಹಕಾರ ಕೂಡ ನಮಗೆ ಬೇಕು. ಇಷ್ಟು ದೊಡ್ಡ ಯೋಜನೆಗಳು ಅನುಷ್ಠಾನಕ್ಕೆ ಸಹಕಾರ ಬೇಕು. ನಮ್ಮ ತಪ್ಪು ಇದ್ದರೆ ತಾವು ಹೇಳಬಹುದು. ಸರ್ಕಾರದ ಯೋಜನೆಗಳಿಗೆ ನೀವು ಕೂಡಾ ಸಹಕಾರ ಕೊಡಬೇಕು ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು.
5 ಕಾರ್ಯಕ್ರಮಗಳನ್ನು ತರಲು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. 100% ಕಾರ್ಯಕ್ರಮ ಅನುಷ್ಠಾನಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ವಿರೋಧ ಪಕ್ಷದವರು ತಾವು ಮಾತನಾಡಿದ ಯೋಜನೆ ಬಗ್ಗೆ ಕೇಳಿದರೆ ಉತ್ತರ ಕೊಡಲ್ಲ. ಪ್ರಧಾನಿಗಳು ದೊಡ್ಡದಾಗಿ 15 ಲಕ್ಷ ರೂ. ಹಾಕುತ್ತೇವೆ ಎಂದಿದ್ರು. ಅದರ ಬಗ್ಗೆ ನೀವು ಬಿಜೆಪಿಯವರಿಗೆ ಕೇಳಬೇಕಲ್ಲಾ. ನಾವು ಘೋಷಣೆ ಮಾಡಿದ ಯೋಜನೆ ಜಾರಿಗೆ ತರುತ್ತೇವೆ. 15 ಲಕ್ಷ ರೂ. ಹಾಕುತ್ತೇವೆ ಎಂದಿದ್ದರ ಬಗ್ಗೆ ಸಂಸದರಿಗೆ ಮಾಜಿ ಸಿಎಂ ಬೊಮ್ಮಾಯಿಗೆ ಕೇಳಿ. ಡಿಮಾನಿಟೈಸೇಷನ್ ಏನಾಯ್ತು, 2 ಸಾವಿರ ನೋಟು ರೂ. ಯಾಕೆ ಸ್ಟಾಪ್ ಆಗಿದ್ದು, ಲಕ್ಷಾಂತರ ಜನರಿಗೆ ಅನಾನುಕೂಲ ಆದ ಬಗ್ಗೆ ನೀವು ಕೇಳಬೇಕಲ್ವಾ, 2 ಸಾವಿರ ನೋಟು ಯಾಕೆ ಬಂದ್ ಆಗಿದೆ ಎಂದು ಉತ್ತರ ಕೊಡಬೇಕಲ್ಲಾ, ಅವರು ಇವರು ನಮ್ಮ ವಿರುದ್ಧ ಮಾತನಾಡುವ ಬದಲು ಅವರ ಪ್ರಧಾನಿಯವರೇ ಹೇಳಿದರ ಬಗ್ಗೆ ಮಾತನಾಡಬೇಕು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಅದರ ಬಗ್ಗೆ ಉತ್ತರ ಕೊಡಲಿ. ಈಗ ನಾವು ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತಿದ್ದೇವೆ, ಹಾಗೆಯೇ ಅವರು ಕೊಡಬೇಕಲ್ಲಾ ಎಂದು ಸಚಿವ ಲಾಡ್ ಹರಿಹಾಯ್ದರು.
ಮಾಜಿ ಸಿಎಂ ಬೊಮ್ಮಾಯಿಗೆ ಲಾಡ್ ತಿರುಗೇಟು: ರಾಜ್ಯದಲ್ಲಿ ಎಮರ್ಜನ್ಸಿ ಬರುತ್ತೆ ಅಂತಾ ಬೊಮ್ಮಾಯಿ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದರು. ಎಮರ್ಜೆನ್ಸಿ ಯಾಕೆ ಬರುತ್ತೆ ಗೊತ್ತಿಲ್ಲ? ಅವರ ಅಭಿಪ್ರಾಯ ಹೇಳಲು ಸ್ವಾತಂತ್ರ್ಯ ಇದೆ. ಅವರು ಹೇಳುತ್ತಾರೆ. ಮೊದಲು ಗ್ಯಾರಂಟಿ ಯೋಜನೆ ಮಾಡೋಕೆ ಸಾಧ್ಯವಿಲ್ಲ ಎಂದಿದ್ದರು. ನಾವು ಈಗ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದೇವೆ. ಈಗ ಎಮರ್ಜೆನ್ಸಿ ಅಂತಾ ಹೇಳಿದ್ದಾರೆ. ಮುಂದೆ ಮತ್ತೆ ಏನು ಹೇಳುತ್ತಾರೋ ನೋಡಬೇಕು ಎಂದು ಟಾಂಗ್ ಕೊಟ್ಟರು.
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರ ಯಾವುದೇ ಕಾಯ್ದೆ ತರಬೇಕಾದರೆ ಮೊದಲು ಮಂಡನೆಯಾಗಬೇಕು. ಮೊದಲಿಗೆ ಅದು ಸರ್ಕಾರದ ಅಭಿಪ್ರಾಯ ಮಾತ್ರ ಆಗಿರುತ್ತದೆ. ಹೀಗಾಗಿ ಯಾವುದೇ ಇದ್ದರೂ ಅದನ್ನು ನಾವು ಮಂಡಿಸುತ್ತೇವೆ ಎಂದರು. ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ವಿಚಾರಕ್ಕೆ ಮಾತನಾಡಿದ ಅವರು, ಯಾವುದೇ ಜಿಲ್ಲೆ ಅಂತಾ ಪೈಪೋಟಿ ಇಲ್ಲ. ಈ ಜಿಲ್ಲೆ ಕೊಟ್ಟರೂ ಮಾಡುತ್ತೇವೆ, ಬೇರೆ ಜಿಲ್ಲೆ ಕೊಟ್ಟರೂ ಕೆಲಸ ಮಾಡುತ್ತೇವೆ. ಕಳೆದ ಸಲ ನಾನು ವಿನಯ್ ಕುಲಕರ್ಣಿ ಸಚಿವರಾಗಿದ್ದೆವು. ಕುಲಕರ್ಣಿ ಈ ಜಿಲ್ಲೆ ಉಸ್ತುವಾರಿ ಇದ್ದರು. ನಾನು ಬಳ್ಳಾರಿ ಉಸ್ತುವಾರಿ ಆಗಿದ್ದೆ. ಯಾವುದೇ ಜಿಲ್ಲೆ ಕೊಟ್ಟರು ವಹಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ವಿನಯ್ ಕುಲಕರ್ಣಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಚಿವನಾಗಿದ್ದಕ್ಕೆ ನಾನು ಗ್ರೇಟ್ ಅಂತ ಅಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನಮಗೂ ಸಿಂಪಥಿಯಿದೆ. ಆದ್ರೆ ಸಚಿವ ಸ್ಥಾನದ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ: ಜನಪ್ರತಿನಿಧಿಗಳು ಒಪ್ಪಿದರೆ ವಿಜಯನಗರ-ಬಳ್ಳಾರಿ ಜಿಲ್ಲೆ ಒಂದುಗೂಡಿಸಲು ಸಿದ್ಧ: ಸಚಿವ ಬಿ ನಾಗೇಂದ್ರ