ಹುಬ್ಬಳ್ಳಿ: ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್ ಕಾರಣ ಎಂದಿರುವ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಮೇಲೆ ಕೊಲೆ ಆರೋಪ ಮಾಡಿದ್ದು ಅಕ್ಷಮ್ಯ. ಚುನಾವಣೆ ಸಂದರ್ಭದಲ್ಲಿ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಈ ಕುರಿತು ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಯೋಗ ಮುಂದಿನ ತೀರ್ಮಾನ ತಗೆದುಕೊಳ್ಳಲಿದೆ ಎಂದರು.
ಭ್ರಷ್ಟಾಚಾರ ಹಣದಿಂದ ಚುನಾವಣೆ ಮಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ಯಾರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಪ್ರತಿಪಕ್ಷದಲ್ಲಿ ಇದ್ದವರಿಗೆ ಸುಖಾಸುಮ್ಮನೆ ಆರೋಪ ಮಾಡುವುದೇ ಆಗಿದೆ ಎಂದರು.
ಕುಂದಗೋಳ ಚುನಾವಣೆ ಬಡವರು ಹಾಗೂ ಶ್ರೀಮಂತರ ನಡುವಿನ ಯುದ್ಧವಾಗಿದೆ. ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಿಗೆ ನೀರು ಬಿಡದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಒತ್ತಾಯಪೂರ್ವಕವಾಗಿ ಹೆದರಿಸಿ, ಬೆದರಿಸಿ ವೋಟ್ ಕೇಳುತ್ತಿದ್ದಾರೆ. ಬಿಜೆಪಿಯವರು ನೀತಿಸಂಹಿತೆ ಉಲ್ಲಂಘಿಸಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ನಾವು ಎಲ್ಲರ ಬಳಿ ಕೈ ಮುಗಿದು ಮತ ಕೇಳುತ್ತಿದ್ದೇವೆ. ಯಡಿಯೂರಪ್ಪನವರ ವೋಟ್ ಇದೇ ಕ್ಷೇತ್ರದಲ್ಲಿ ಇದ್ದರೆ ಅವರಿಗೂ ಕೇಳುತ್ತಿದ್ದೆವು ಎಂದು ತಿಳಿಸಿದರು.