ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಜನರು ಕುಡಿವ ನೀರಿಗಾಗಿ ದಿನವೂ ಹೋರಾಟ ನಡೆಸುವಂತಾಗಿದೆ. ಇತ್ತೀಚೆಗೆ ಜಲಮಂಡಳಿ ನೀರು ಸರಬರಾಜು ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಅಂಡ್ ಟಿ ಎಂಬ ಕಂಪನಿಗೆ ನೀಡಿದೆ. ಆದರೆ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುವಂತೇ ಹದಿನೈದು ದಿನಗಳಿಂದ ಕುಡಿವ ನೀರಿಗಾಗಿ ಜನರ ಪರದಾಟ ಮುಂದುವರೆದಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಸಾಕಷ್ಟು ಬಾರಿ ಸಭೆ ಮಾಡಿದ್ದರೂ ಜನರ ಭವಣೆ ಮಾತ್ರ ಬಗೆಹರಿಯುತ್ತಿಲ್ಲ. ಹಳೇ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್.ಎಂ.ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ, ಹೊಸುರು, ವಿದ್ಯಾನಗರ ಸೇರಿದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಬಹುತೇಕ ಕಡೆಯಲ್ಲಿ ಸುಮಾರು ಹದಿನೈದು ದಿನ ಕಳೆದರೂ ಕುಡಿಯುವ ನೀರು ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಲ್ಲದೇ ಉಣಕಲ್ ಗ್ರಾಮದ ವೀರಭದ್ರೇಶ್ವರ ಕಾಲೊನಿಯಲ್ಲಿ ವಾಟರ್ ಟ್ಯಾಂಕ್ ಬರದೇ ಇದ್ದರೇ ಕುಡಿಯಲು ನೀರು ಕಾಣುವುದೇ ದೊಡ್ಡ ಸವಾಲಾಗಿದೆ ಎಂದು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕಿದ್ದಾರೆ. ಇನ್ನೂ ಇತ್ತೀಚೆಗೆ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಚುನಾಯಿತ ಕಾರ್ಪೊರೇಟರ್ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಭೆಯಲ್ಲಿ ಸಮಜಾಯಿಷಿ ಹೇಳುವುದು ಬೇಡ ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಇದರ ಮುಂದುವರಿದ ಭಾಗವಾಗಿ ನವದೆಹಲಿಯಲ್ಲಿ ಕೂಡ ಸಚಿವರು ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕಿತ್ತು ಮಾಡಿದ್ದರು. ಆದರೂ ಕೂಡ ಜನರ ಸಮಸ್ಯೆ ಮಾತ್ರ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದರೇ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದಿಲ್ಲಿಗೆ ತೆರಳಿದ ಕೈ ನಾಯಕರು: ರಾತ್ರಿಯೇ ವಾಪಸ್ ಸಾಧ್ಯತೆ