ಹುಬ್ಬಳ್ಳಿ: ಅವಳಿ ನಗರದಲ್ಲಿ ಹಳೆ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಸಮಸ್ಯೆ ಹೆಚ್ಚಾಗತೊಡಗಿದೆ. ಪರಿಣಾಮ ಕಟ್ಟಡ ಕಾಮಗಾರಿ ನಡೆಸುವವರು ಮಾತ್ರ ನಗರದ ಹೊರವಲಯದ ಪ್ರಮುಖ ರಸ್ತೆಗಳಲ್ಲಿಯೇ ಕಸ ವಿಲೇವಾರಿ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅವಳಿನಗರದಲ್ಲಿ ಮೊದಲೇ ಹೊಸ ಹೊಸ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಮಳಿಗೆಗಳು ತಲೆ ಎತ್ತಿ ‘ಸ್ಮಾರ್ಟ್‌ಸಿಟಿ’ ಅಂದ ಹೆಚ್ಚಿಸುವುದು ಒಂದೆಡೆಯಾದರೆ ಇದೇ ವೇಳೆ ಹಳೆ ಕಟ್ಟಡಗಳ ತ್ಯಾಜ್ಯವನ್ನು ರಸ್ತೆಗಳ ಪಕ್ಕದಲ್ಲಿ ಸುರಿದು ಹೋಗುತ್ತಿರುವುದರಿಂದ ಮಾಲಿನ್ಯ ಉಂಟಾಗುತ್ತಿದೆ. ಹಳೆ ಕಟ್ಟಡಗಳನ್ನು ಕೆಡವಿದ ಬಳಿಕ ಸಿಗುವ ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಎಲೆಕ್ಟ್ರಿಕ್ ವೈರ್, ಕಟ್ಟಿಗೆ ಸೇರಿದಂತೆ ಮತ್ತಿತರರ ತ್ಯಾಜ್ಯಗಳನ್ನು ಪ್ರಮುಖ ರಸ್ತೆಗಳ ಬದಿ ತಂದು ರಾಶಿ ಹಾಕಲಾಗುತ್ತಿದೆ. ಇದು ಸಮೀಪದ ನಿವಾಸಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಕಟ್ಟಡಗಳ ತ್ಯಾಜ್ಯವನ್ನು ಟ್ರ್ಯಾಕ್ಟರ್, ಲಾರಿಗಳಲ್ಲಿ ತುಂಬಿಕೊಂಡು ನಗರದ ಹೊರವಲಯದ ಪ್ರಮುಖ ರಸ್ತೆಗಳಲ್ಲಿ, ಜನ ಸಂಚಾರವಿಲ್ಲದ ಸಂದರ್ಭದಲ್ಲಿ ಸುರಿದು ಹೋಗಲಾಗುತ್ತಿದೆ. ಹೀಗಾಗಿ, ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯದಾಗಿದೆ.
ಹುಬ್ಬಳ್ಳಿಯ ಕುಸುಗಲ್ ರಸ್ತೆ, ಗಬ್ಬೂರ ರಸ್ತೆ, ಕಾರವಾರ ರಸ್ತೆ, ಸುಳ್ಳ ರಸ್ತೆ, ಗೋಕುಲ ಬೈಪಾಸ್ ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಹೆಚ್ಚಾಗಿ ಹಳೇ ಕಟ್ಟಡಗಳ ತ್ಯಾಜ್ಯವನ್ನು ತಂದು ರಾಶಿ ಹಾಕಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಸುರಿದು ಹೋಗುತ್ತಿರುವವರನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಪತ್ತೆ ಹಚ್ಚಿ, ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಗರದ ಸೌಂದರ್ಯ ಹಾಳಾಗುವ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಓದಿ: ವಿಜಯಪುರ : ಶಿಶು ಮಾರಾಟ ಪ್ರಕರಣ ಏನಾಗಿದೆ ಅಂತಾ ಜಿಲ್ಲಾಧಿಕಾರಿಗಳು ಹೇಳ್ತಾರೆ ಕೇಳಿ..