ಧಾರವಾಡ: ಮತದಾರರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುವುದು ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಆದ್ರೆ ಇಲ್ಲೊಂದು ಕಡೆ ಫ್ಯಾಷನ್ ಶೋ ಮೂಲಕ ಮತದಾರರನ್ನು ಸೆಳೆಯಲು ವಿಭಿನ್ನವಾದ ರೀತಿಯಲ್ಲಿ ಪ್ರಯತ್ನ ಮಾಡಲಾಗಿದೆ.
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಈ ಸಲ ಒಟ್ಟು 32 ಸಾವಿರ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಪಡೆದುಕೊಂಡಿದ್ದಾರೆ. ಅವರನ್ನು ಇಂತಹ ಮನರಂಜನೆ ಮೂಲಕ ಮತಗಟ್ಟೆಗೆ ಸೆಳೆಯಬೇಕು ಎಂದುಕೊಂಡು ಈ ಫ್ಯಾಷನ್ ಶೋ ನಡೆಸಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ನ ಬ್ಯಾಚುಲರ್ ಆಫ್ ಫ್ಯಾಷನ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ವಿನ್ಯಾಸದ ಉಡುಪುಗಳನ್ನು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕೆಲವು ಮುದ್ದು ಮಕ್ಕಳು ಧರಿಸಿಕೊಂಡು ವೈಯ್ಯಾರದ ನಡಿಗೆಯಲ್ಲಿ ಗಮನ ಸೆಳೆದರು.
ಈ ವೇಳೆ ಕೈಯಲ್ಲಿ ಮತದಾನ ಜಾಗೃತಿಯ ಫಲಕಗಳನ್ನು ಹಿಡಿದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಅನ್ನೋ ಸಂದೇಶ ಸಾರಿದರು.