ಧಾರವಾಡ: ವಿಶ್ವಕರ್ಮರು ಸೌಲಭ್ಯದಿಂದ ವಂಚಿತರಾಗಿರೋ ಹಿನ್ನೆಲೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಕೆ.ಪಿ ನಂಜುಂಡಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮರು ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಿದ್ದಾರೆ. ಎಷ್ಟೋ ಕಡೆ ನಮ್ಮ ಸಮಾಜದವರು ಬೇರೆ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮತಾಂತರ ಆಗುತ್ತಿದ್ದಾರೆ. ನಾನು ಎಂಎಲ್‌ಸಿ ಆಗಿ ಏನಿದೆ ಅಂತಾ ಅವರನ್ನು ಹಿಡಿದುಕೊಳ್ಳಲಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಐದು ತಿಂಗಳಿನಿಂದ ನಿಗಮ ಖಾಲಿ ಇದೆ ಭರ್ತಿ ಮಾಡುತ್ತಿಲ್ಲ ಎಂದರು.
ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಿದ್ದಾರೆ. ಅವರನ್ನು ತಡೆಯಲು ಆಗುತ್ತಿಲ್ಲ. ಯಾಕೆ ಮತಾಂತರ ಆಗುತ್ತೀರಾ ಎಂದು ಕೇಳಿದರೆ, ತಿನ್ನೋಕೆ ಗತಿ ಇಲ್ಲ ನಿಮ್ಮ ಸರ್ಕಾರ ತಂದು ಕೊಡುತ್ತಾ? ಅಂತಾ ಕೇಳ್ತಾರೆ. ಊಟಕ್ಕೆ ಜಾತಿ ಇಲ್ಲ ಅದು ಇಲ್ಲದೇ ಇದ್ದಾಗಲೇ ಅಲ್ವೇ ಬೇರೆ ಕಡೆ ಹೋಗೋದು. ಕಸುಬುಗಳನ್ನು ನಂಬಿದವರ ಸ್ಥಿತಿ ಶೋಚನೀಯವಾಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ ವಿಶ್ವಕರ್ಮರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಿವಾರ ಹಾಕಿದವರೆಲ್ಲರೂ ಬ್ರಾಹ್ಮಣರಾ?: ನಮ್ಮ ಸಮಾಜದವರು ಕೂಡಾ ಜನಿವಾರ ಹಾಕುತ್ತಾರೆ, ಜನಿವಾರ ಹಾಕಿದವರು ಎಲ್ಲರೂ ಬ್ರಾಹ್ಮಣರು ಅಲ್ಲಾ. ನಮ್ಮ ಸಮಾಜದವರು ನಾವು ಬ್ರಾಹ್ಮಣರು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ನಾವು ಬ್ರಾಹ್ಮಣರು ಅಲ್ಲಾ ಎಂದು ಹೇಳಲು ಜನಜಾಗೃತಿ ಮೂಡಿಸುವ ಸ್ಥಿತಿ ಬಂದಿದೆ. ಹಿಂದುಳಿದ ಸಮಾಜದಲ್ಲಿ ಬಹಳಷ್ಟು ಜನ ಜನಿವಾರ ಹಾಕುತ್ತಾರೆ. ಹಾಗಂತ ಬ್ರಾಹ್ಮಣ ಎಂದು ಕರೆಯಲಾಗುತ್ತಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಆಟೋ ರಿಕ್ಷಾ ಸ್ಫೋಟ ಪ್ರಕರಣ ಪ್ರಾಥಮಿಕ ತನಿಖೆಯಲ್ಲಿ ಭಯೋತ್ಪಾದಕ ಕೃತ್ಯ ಎಂದು ತಿಳಿದು ಬಂದಿದೆ : ಸಿಎಂ ಬೊಮ್ಮಾಯಿ