ಧಾರವಾಡ: ಬಹಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಕಲಾವಿದನೊಬ್ಬ ಹರಿಬಿಟ್ಟ ವಿಡಿಯೋಗೆ ಅನಿವಾಸಿ ಭಾರತೀಯರು ಸ್ಪಂದಿಸಿದ್ದಾರೆ.
ಹೌದು, ಧಾರವಾಡ ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಅವರು ವಿಡಿಯೋವೊಂದನ್ನು ಹರಿ ಬಿಟ್ಟಿದ್ದರು. ಸಾರ್ವಜನಿಕ ಗಣೇಶೋತ್ಸವವನ್ನು ಈ ಮೊದಲು ರಾಜ್ಯ ಸರ್ಕಾರ ನಿಷೇಧ ಮಾಡಿತ್ತು. ಇದರಿಂದ ನೊಂದ ಕಲಾವಿದ ಮಂಜುನಾಥ ಹಿರೇಮಠ ವಿಡಿಯೋ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿದ್ದರಿಂದ ಕಲಾವಿದನಿಗೆ ಅನಿವಾಸಿ ಭಾರತೀಯರು ಆಸರೆಯಾಗಿದ್ದಾರೆ.
ಮೊದಲು ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದ್ದರಿಂದ ಹಿಂದೂಪರ ಸಂಘಟನೆಗಳು ತೀವ್ರ ಹೋರಾಟ ಮಾಡಿದ್ದವು. ಇದರ ಫಲವಾಗಿ ರಾಜ್ಯ ಸರ್ಕಾರ ಕೆಲ ನಿಯಮಗಳನ್ನು ಸಡಿಲಿಕೆ ಮಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ಬೆಹರೇನ್, ಕ್ಯಾಲಿಪೋರ್ನಿಯಾ ಸೇರಿದಂತೆ ವಿವಿಧ ದೇಶಗಳಲ್ಲಿನ ಅನಿವಾಸಿ ಭಾರತೀಯರು ಎರಡು ಮೂರು ಬಾರಿ ಜೂಮ್ ಮೂಲಕ ಮೀಟಿಂಗ್ ಮಾಡಿ ಕಲಾವಿದನಿಗೆ ಧೈರ್ಯ ತುಂಬಿ, ಗಣಪತಿ ಮೂರ್ತಿ ಖರೀದಿಸಲು ಒಪ್ಪಿದ್ದಾರೆ.
ವರ್ಚ್ಯೂವಲ್ ಗಣೇಶೋತ್ಸವ:
ಅನಿವಾಸಿ ಭಾರತೀಯರು ಈ ಬಾರಿ ವರ್ಚ್ಯೂವಲ್ ಗಣೇಶೋತ್ಸವ ಆಚರಣೆ ಮಾಡಲು ಮುಂದಾಗಿದ್ದಾರೆ. ಅನಿವಾಸಿ ಭಾರತೀಯರು ಖರೀದಿಸಿದ ಎಲ್ಲ ಗಣೇಶ ಮೂರ್ತಿಗಳನ್ನು ಕಲಾವಿದ ಮಂಜುನಾಥ ಹಿರೇಮಠ ಅವರೇ ಐದು ದಿನಗಳ ಕಾಲ ಅವರ ಮನೆಯಲ್ಲಿ ಪೂಜೆ ಮಾಡಬೇಕು. ಗಣಪತಿ ಮೂರ್ತಿಯ ನೇರ ದರ್ಶನ, ನಿತ್ಯದ ಪೂಜೆ ಹಾಗೂ ವಿಸರ್ಜನೆ ಎಲ್ಲವನ್ನೂ ಸಾಮಾಜಿಕ ಜಾಲತಾಣದ ಮೂಲಕ ಅನಿವಾಸಿ ಭಾರತೀಯರು ವೀಕ್ಷಿಸಿ ಗಣೇಶನ ದರ್ಶನ ಮಾಡಲಿದ್ದಾರಂತೆ.
ಒಟ್ಟಿನಲ್ಲಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕಲಾವಿದನಿಗೆ ಸಹಾಯ ಮಾಡಿ ಮಾನವೀಯ ಕೆಲಸ ಮಾಡಿದ್ದಾರೆ..