ಹುಬ್ಬಳ್ಳಿ: ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ವಾಣಿಜ್ಯ ನಗರಿಯ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡು ಬಂದಿತು.
ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿಗಳನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಕುಂದು ಬಂದಂತೆ ಕಾಣಲಿಲ್ಲ. ನೆರೆಯಿಂದ ಕಂಗೆಟ್ಟಿದ್ದರೂ ಹೆಚ್ಚಿನ ಮಂದಿ ಮಾರುಕಟ್ಟೆಯಲ್ಲಿ ಅಡ್ಡಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ಬಿಸಿ ಹಬ್ಬದ ಸಡಗರದ ಮುಂದೆ ಗೌಣವಾಯಿತು.
ಇನ್ನg, ನಗರದ ಜನತಾ ಬಜಾರ್, ಗಾಂಧಿ ಮಾರ್ಕೆಟ್, ಈದ್ಗಾ ಮೈದಾನ, ಸಂಗೊಳ್ಳಿ ರಾಯಣ್ಣ ವೃತ್ತದ ಅಕ್ಕಪಕ್ಕ ಸೇರಿದಂತೆ ವಿವಿಧೆಡೆ ಹಣ್ಣು, ಹೂ, ತರಕಾರಿ, ಬಾಳೆ ಕಂದು, ಮಾವಿನ ಸೊಪ್ಪುಗಳ ವ್ಯಾಪಾರ ಭರಾಟೆ ಜೋರಾಗಿತ್ತು. ಒಟ್ಟಾರೆಯಾಗಿ ಮಳೆಯ ನಡುವೆಯೂ ನಗರದಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.