ಹುಬ್ಬಳ್ಳಿ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರಿಗೆ ಜೆಡಿಎಸ್ ಬೆಂಬಲಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಾಲ್ಕು ಜಿಲ್ಲೆಯ ಮತದಾರರನ್ನ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ದೇವೇಗೌಡರು, ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧಾರ ಮಾಡಿದ್ದೇವೆ. ಈ ದಿಸೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದರು.
ಪದವೀಧರ ಚುನಾವಣೆ ದಿನಾಂಕ ಪ್ರಕಟವಾದ ಮೇಲೆ ಮತದಾರರ ಭೇಟಿ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಅಂತರ ಕಾಪಾಡಿಕೊಳ್ಳಲು, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದೇವೆ. ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎಂದು ತಿಳಿಸಿದರು.
ಕೊರೊನಾ ವೈರಸ್ ಸಂಪೂರ್ಣ ಹೋಗುವವರೆಗೆ ಪ್ರಾಥಮಿಕ ಹಂತದಲ್ಲಿ ಶಾಲೆ ಆರಂಭ ಬೇಡ ಎಂದಿದ್ದೆ, ಇದೀಗ ನವೆಂಬರ್ 17 ರಿಂದ ಕಾಲೇಜ್ ಆರಂಭ ಮಾಡುವುದು ತಪ್ಪೇನಿಲ್ಲ. ಪ್ರಾಥಮಿಕ ಶಾಲೆ ಹೊರತುಪಡಿಸಿ ಉಳಿದೆಲ್ಲಾ ಆರಂಭ ಮಾಡಲಿ. ಈ ವೇಳೆ ಹತ್ತು ಮಕ್ಕಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂರಿಸಬಾರದು. ಶೇ.50ರಷ್ಟು ಸಿಲಬಸ್ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ನಾನು ಪಕ್ಷದ್ರೋಹ ಮಾಡಿಲ್ಲ- ಶಿವಶಂಕರ ಕಲ್ಲೂರ : ನಾನು ಎಂದಿಗೂ ಪಕ್ಷ ದ್ರೋಹ ಮಾಡಿಲ್ಲ . ಬಸವರಾಜ ಹೊರಟ್ಟಿ ಹಾಗೂ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿರುವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದರು.
ಜೆಡಿಎಸ್ ಪಕ್ಷಕ್ಕೆ ಧನ್ಯವಾದ-ಬಸವರಾಜ್ ಗುರಿಕಾರ: ಜೆಡಿಎಸ್ ಬೆಂಬಲ ನೀಡಿದ್ದಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಜೆಡಿಎಸ್ ಬೆಂಬಲದಿಂದ ನನಗೆ ಆನೆ ಬಲ ಬಂದಿದೆ. ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಬಾರಿಯ ಪಶ್ಚಿಮ ಪದವೀಧರ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.