ಧಾರವಾಡ: ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪರಿಶೀಲನೆ ಮಾಡ್ತಿದ್ದಾರೆ. ಕೆಲ ಬದಲಾವಣೆ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಯಾಂಟೀನ್ ಹೆಸರು ಬದಲಿಸುವ ವಿಚಾರ ಇಲ್ಲ ಎಂದರು. ಅವ್ಯವಹಾರ ಸರಿಪಡಿಸುವ ಪ್ರಯತ್ನ ನಡೆದಿದೆ. ಪ್ರಾಪರ್ಟಿ ಟ್ಯಾಕ್ಸ್ ಹೆಚ್ಚಳ ಅನಿವಾರ್ಯವಾಗಿದೆ. ಹತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಹೆಚ್ಚಿಸಲಾಗಿದೆ. ಅದೆಲ್ಲವೂ ಅಭಿವೃದ್ಧಿಗೆ ಬಳಕೆಯಾಗಲಿದೆ. ಜನ ತೆರಿಗೆ ಕಟ್ಟಿ ಮೂಲಭೂತ ಸೌಲಭ್ಯ ಕೇಳುವ ಹಕ್ಕು ಕೇಳಬೇಕು ಎಂದರು.
ಟ್ಯಾಕ್ಸ್ ಕಡಿಮೆ ಮಾಡಿ ಅಂದ್ರೆ ಡೆವಲಪ್‌ಮೆಂಟ್ ಕಡಿಮೆ ಮಾಡೋಕೆ ಆಗುತ್ತಾ...? ಎಲ್ಲದಕ್ಕೂ ಮಾನದಂಡವಿದೆ. ಎಲ್ಲವನ್ನೂ ಸರ್ಕಾರವೇ ಮಾಡೋಕೆ ಆಗೋದಿಲ್ಲ ಜನ ತೆರಿಗೆ ಕಟ್ಟಿ ಅಭಿವೃದ್ಧಿ ಪಡೆಯಬೇಕು ಎಂದು ಮನವಿ ಮಾಡಿಕೊಂಡರು
ಇನ್ನು ರಾಜ್ಯಸಭಾ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್ ತೀರ್ಮಾನ. ಅದರ ಬಗ್ಗೆ ನಾನೇನು ಮಾತನಾಡಲಿ. ಆ ಕುರಿತು ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ನಾಯಕರು ಮಾತನಾಡುತ್ತಾರೆ ಎಂದರು.