ಹುಬ್ಬಳ್ಳಿ: ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಕಾನೂನುಗಳಿದ್ದರೂ ದೇಶದಲ್ಲಿ ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ. ಆದಾಗ್ಯೂ ಕರ್ನಾಟಕದಲ್ಲಿ 'ವಿನಯ ಸಾಮರಸ್ಯ ಯೋಜನೆ' ಜಾರಿಯಾದರೂ ಧಾರವಾಡ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಪ್ರಕರಣ ಬೆಳಕಿಗೆ ಬಂದಿದೆ.
ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಅಸ್ಪೃಶ್ಯತೆ ಎಂಬ ಅನಿಷ್ಠ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಇನ್ನೂ ಜೀವಂತವಾಗಿದೆ. ಹುಬ್ಬಳ್ಳಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ರೊಟ್ಟಿಗವಾಡದಲ್ಲಿ ದಲಿತರಿಗೆ ದೇವಸ್ಥಾನ, ಕ್ಷೌರದ ಅಂಗಡಿ, ಹೊಟೇಲ್ಗಳಿಗೆ ಪ್ರವೇಶವಿಲ್ಲವಂತೆ. ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳು ವಾಸವಿದ್ದು, ಸವರ್ಣೀಯರು ದಲಿತರನ್ನು ಯಾವುದಕ್ಕೂ ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
"ರೊಟ್ಟಿಗವಾಡ ಗ್ರಾಮ 400ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಸಹ ನಮಗೆ ಸಮಾನತೆ ಸಿಕ್ಕಿಲ್ಲ. ಸರ್ಕಾರದ ಸವಲತ್ತುಗಳು ದೊರೆತಿಲ್ಲ, ಗ್ರಾಮದಲ್ಲಿ ದೇವಸ್ಥಾನಗಳಿಗೆ ನಮಗೆ ಪ್ರವೇಶವಿಲ್ಲ. ಕ್ಷೌರದ ಅಂಗಡಿಗೆ ಹೋದರೆ ಕ್ಷೌರ ಮಾಡುವುದಿಲ್ಲ, ಹೋಟೆಲ್‌ಗಳಲ್ಲಿ ನಮಗೆ ಪ್ರವೇಶಕ್ಕೆ ನಿರ್ಬಂಧವಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಮುಖ್ಯಮಂತ್ರಿಗಳು ನಮಗೆ ನ್ಯಾಯ ದೊರಕಿಸಿ ಕೊಡಬೇಕು" ಎಂದು ದಲಿತ ಮುಖಂಡ ಡಿ.ಬಿ.ಚಲವಾದಿ ಸೇರಿದಂತೆ ವಿವಿಧ ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂಓದಿ: ಮೈಸೂರು: ಪ್ರತಾಪ್ ಸಿಂಹರನ್ನು ಸಂಸದ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ