ಹುಬ್ಬಳ್ಳಿ : ಪಂಚರಾಜ್ಯ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಈ ಮೂರು ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಆಡಳಿತಕ್ಕೆ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜನರಿಗೆ ಮಾಡಿದ ಮೋಸದಂತೆ ರಾಜಸ್ಥಾನದಲ್ಲಿ ಮಾಡಿದ್ದಾರೆ" ಎಂದು ಕಿಡಿಕಾರಿದರು.
"ಕರ್ನಾಟಕ ಸರ್ಕಾರ ಉಚಿತದ ಹೆಸರಿನಲ್ಲಿ ಹೇಳೋದು ಒಂದು ಮಾಡೋದು ಒಂದು ರೀತಿ. ಎಲ್ಲಾ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಜನರು ರಸ್ತೆ, ಆಸ್ಪತ್ರೆ ಬಗ್ಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರು ಮಾತ್ರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ" ಎಂದರು.
"ಸದ್ಯ ರಾಜ್ಯದಲ್ಲಿ ಆರ್ಥಿಕ ಅಶಿಸ್ತು ಮೂಡಿದೆ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗಿದೆ. ಕಾಂಗ್ರೆಸ್ ತನ್ನ ಪಕ್ಷದಲ್ಲಿನ ಆಂತರಿಕ ಜಗಳದಿಂದ ಸಂಪೂರ್ಣವಾಗಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿದೆ. ಬರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತಾತ್ಕಾಲಿಕ ಪರಿಹಾರವನ್ನು ಕೂಡ ಈವರೆಗೆ ನೀಡಿಲ್ಲ. ನಯಾ ಪೈಸೆಯನ್ನು ಜನರಿಗೆ ಕೊಟ್ಟಿಲ್ಲ. ಕಾಂಗ್ರೆಸ್ನವರು ಜನರ ಹಿತವನ್ನು ಮರೆಯುತ್ತಿದ್ದಾರೆ. ಅವರು ಸಿಎಂ, ಡಿಸಿಎಂ ಸ್ಥಾನದ ಜಗಳದಲ್ಲಿ ಮುಳುಗಿದ್ದಾರೆ. ಈ ಮೂಲಕ ಗೊಂದಲ ಸೃಷ್ಟಿ ಮಾಡಿ ಆರೇ ತಿಂಗಳಲ್ಲಿ ಕಾಂಗ್ರೆಸ್ ಆಡಳಿತ ಅದೋಗತಿಗೆ ಇಳಿದು ಹೋಗಿದೆ" ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಗುಡುಗಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸುಳ್ಳನ್ನು ತೆಲಂಗಾಣ ಚುನಾವಣೆಯಲ್ಲಿ ಹೇಳುವೆ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಇನ್ನು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ ವಿಚಾರವಾಗಿ ಮಾತನಾಡಿದ ಅವರು, "ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಬಿ ವೈ ವಿಜಯೇಂದ್ರ ನೇಮಕವನ್ನು ಸ್ವಾಗತ ಮಾಡಿದ್ದೇನೆ. ಕೇಂದ್ರದ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಯುವ ನಾಯಕತ್ವಕ್ಕೆ ಅವಕಾಶ ಮಾಡಿಕೊಟ್ಟು, ರಾಜ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ತಿಳಿಸಲಾಗಿದೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರ ಇದೆ" ಎಂದು ಹೇಳಿದ್ದಾರೆ.
"ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2013ರಂತೆ ಈ ಬಾರಿಯೂ 25ಕ್ಕೂ ಹೆಚ್ಚು ಸ್ಥಾನದಲ್ಲಿ ಜಯ ಸಾಧಿಸಲಿದೆ. ಆದರೆ ಕಾಂಗ್ರೆಸ್ನವರು ಬಾಲಿಶವಾಗಿ ಮಾತನಾಡುತ್ತಿದ್ದಾರೆ" ಎಂದು ಹರಿಹಾಯ್ದರು. ಬಳಿಕ ಅರವಿಂದ ಬೆಲ್ಲದ ಅಸಮಾಧಾನ ವಿಚಾರವಾಗಿ ಮಾತನಾಡಿ, "ಅವರು ಯಾವ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೋ ಗೊತ್ತಿಲ್ಲ. ಅವರ ಜೊತೆ ಮಾತಾಡಿ ಗೊಂದಲ ಪರಿಹರಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ : ಪಂಚರಾಜ್ಯ ಚುನಾವಣೆ: ಜೀವನದಲ್ಲೇ ಮೊದಲ ಬಾರಿಗೆ ಮತದಾನ ಮಾಡಿದ 93 ವರ್ಷದ ಶೇರ್ಸಿಂಗ್!