ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಾಗಶೆಟ್ಟಿಕೊಪ್ಪ ವಿವೇಕಾನಂದ ಕಾಲೋನಿಯ ರೋಟರಿ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
'ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪಲ್ಲ'
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪೇನಲ್ಲ. ಅದು ಚರ್ಚೆಯ ವಿಷಯವೇ ಅಲ್ಲ. ಅವರಿಗೆ ಇನ್ನೂ 18 ತಿಂಗಳ ಅಧಿಕಾರ ಇದೆ. ಸಾಮಾನ್ಯವಾಗಿ ಯಾರು ಸಿಎಂ ಇರ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸಹಜ. ಅಮಿತ್ ಶಾ ಬಹಳ ಸೋಚ್ ಸಮಜಕರ್ ಆಗಿಯೇ ಹೇಳಿದ್ದಾರೆ. ಅವರು ಹೇಳಿದ ಮೇಲೆ ಅದು ಚರ್ಚೆಯ ವಿಷಯ ಅಲ್ಲ ಎಂದರು.
'ಪಕ್ಷ ಹಿರಿಯರನ್ನು ಕಡೆಗಣಿಸಿಲ್ಲ'
ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಬಿಎಸ್ವೈ ಅವರನ್ನು ಕಡೆಗಣಿಸುತ್ತಿಲ್ಲ. ಬಹಳಷ್ಟು ಜನರು ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ತೆಗೆದರು ಅಂತಿದ್ದಾರೆ. ಆದರೆ ಬಿಎಸ್ವೈ ಸ್ವಪ್ರೇರಣೆಯಿಂದ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಅವರೇ ಹೇಳಿದಂತೆ 2 ವರ್ಷ ಅಧಿಕಾರ ನಡೆಸಿ ಬೇರೆಯವರಿಗೆ ಅಧಿಕಾರ ನೀಡಿದ್ದಾರೆ. ಯಾರಿಗಾದ್ರೂ ಕ್ರೆಡಿಟ್ ಕೊಡುವುದಿದ್ದರೆ ಅದು ಯಡಿಯೂರಪ್ಪರಿಗೆ ಸಿಗಬೇಕು ಎಂದು ಹೇಳಿದರು.
ಹೈಕಮಾಂಡ್ ಬಹಳಷ್ಟು ಚರ್ಚಿಸಿ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ಬೊಮ್ಮಾಯಿ ಅವರಿಂದ ಉತ್ತಮ ಆಡಳಿತ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಾರ್ಟಿ ಸಭೆ ಸೇರುತ್ತೆ. ಅಲ್ಲಿ ಹಿರಿಯ ನಾಯಕರಾದ ಬಿಎಸ್ವೈ-ಜಗದೀಶ್ ಶೆಟ್ಟರ್ ಸಲಹೆ ಪಡೆಯುತ್ತೇವೆ ಎಂದರು.
ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿರುವ ಸ್ಪಿರಿಟ್ ಮತ್ತ್ಯಾವ ಇಲಾಖೆಯಲ್ಲೂ ನೋಡಲು ಸಾಧ್ಯವಿಲ್ಲ: ಕಮಲ್ ಪಂತ್