ಹುಬ್ಬಳ್ಳಿ: "ಮೊನ್ನೆ ಸದನದಲ್ಲಿ ಸಂವಹನ ಕೊರತೆಯಿಂದ ಧರಣಿ ಮಾಡಬೇಕೋ ಅಥವಾ ಸಭಾತ್ಯಾಗ ಮಾಡಬೇಕೋ ಎಂಬ ಬಗ್ಗೆ ಗೊಂದಲ ಉಂಟಾಗಿತ್ತು. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯಿಸಿ, "ನಾವು ಈ ಕುರಿತು ಸಭೆ ಕರೆದು ಯಾರಿಗಾದರೂ ಗೊಂದಲ ಇದ್ದರೆ ಅದನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ" ಎಂದರು.
ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬಕೆಟ್ ರಾಜಕಾರಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ವಿಶ್ವನಾಥ್ ಏನು ಹೇಳಿದ್ದಾರೆ ಗೊತ್ತಿಲ್ಲ. ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು. ಈ ನಿಟ್ಟಿನಲ್ಲಿ ವಿಶ್ವನಾಥ್ ಅವರನ್ನು ಕರೆದು ಮಾತನಾಡುತ್ತೇನೆ. ಬಿಜೆಪಿ ಶಿಸ್ತಿನಿಂದ ನಡೆದುಕೊಂಡ ಪರಿಣಾಮ ದೇಶದ ಅನೇಕ ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಂಸದರು, ಶಾಸಕರು ಸೇರಿ ದೇಶದಲ್ಲಿ ಸುಮಾರು 50 ಸಾವಿರ ಜನಪ್ರತಿನಿಧಿಗಳು ಬಿಜೆಪಿಯಲ್ಲಿದ್ದಾರೆ. ಸಮಸ್ಯೆಗಳಿದ್ದರೆ ಒಟ್ಟಿಗೆ ಕುಳಿತು ಮಾತನಾಡುವಂತೆ" ಜೋಶಿ ಸಲಹೆ ನೀಡಿದ್ದಾರೆ.
ಕಿನ್ಯಾಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, "ವಿದೇಶಾಂಗ ಮಂತ್ರಾಲಯವಾಗಿ ಜಾಗತಿಕ ಮಟ್ಟದಲ್ಲಿ ಅನೇಕ ನೆರವು ನೀಡಬೇಕಾಗುತ್ತೆ. ಬೇರೆ ಬೇರೆ ರಾಜ್ಯಗಳಿಗೆ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮೂಲಕ ಹಣ ಕೊಡ್ತಾ ಇರುತ್ತೇವೆ. ರಾಜ್ಯ ಸರ್ಕಾರ ತನ್ನ ಖಾತೆಯಲ್ಲಿರುವ ಹಣ ಖರ್ಚು ಮಾಡಲಿ. ಕೇಂದ್ರ ಸರ್ಕಾರ ನೀಡಿರುವ ಹಣ ಮೊದಲು ಖರ್ಚು ಮಾಡಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡೋದು ಸರಿಯಲ್ಲ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಇರೋದರಿಂದ ಬರ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಬೇರೆ ಬೇರೆ ಸ್ಕೀಮ್ಗಳ ಹೆಸರಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಕೆಎಸ್ಆರ್ಟಿಸಿ ಮತ್ತು ವಿದ್ಯುತ್ ನಿಗಮಗಳಿಗೆ ದುಡ್ಡು ಕೊಟ್ಟಿಲ್ಲ. ಮೊದಲು ನೀವು ಬರ ಪರಿಹಾರ ಕಾಮಗಾರಿ ಆರಂಭಿಸಿ. ಭಾರತ ದೇಶ ದೊಡ್ಡದಿದ್ದು, ಅನೇಕ ರಾಜ್ಯಗಳಿರುವುದರಿಂದ ಹಣ ಬರೋದು ತಡವಾಗಬಹುದು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನು ಶೀಘ್ರವೇ ನಿಮ್ಮ ಮುಂದೆ ಇಡುತ್ತೇನೆ" ಎಂದರು.
ಬೈಕ್ ರ್‍ಯಾಲಿ ಸ್ಥಗಿತ: ಖ್ಯಾತ ಚಿತ್ರನಟಿ ಲೀಲಾವತಿ ನಿಧನದ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸ್ವಾಗತಿಸಿಲು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಯನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಲೀಲಾವತಿ ಅವರು ಚಿರಸ್ಮರಣೀಯರು, ಅವರ ನಿಧನದಿಂದಾಗಿ ಬೈಕ್ ರ್‍ಯಾಲಿಯನ್ನು ಸ್ಥಗಿತಗೊಳಿಸಿದ್ದೇವೆ. ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ: ನಟಿ ಲೀಲಾವತಿ ಅಂತಿಮ ದರ್ಶನ ಪಡೆದು ಭಾವುಕರಾದ ದ್ವಾರಕೀಶ್, ಸಾಧುಕೋಕಿಲ, ರಮೇಶ್ ಅರವಿಂದ್