ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂಭ್ರಮ ಸಹಿಸದೆ ಹೊಟ್ಟೆಕಿಚ್ಚಿನಿಂದ ಕಾಂಗ್ರೆಸ್ನವರು ರಾಜ್ಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ನೀತಿ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಕೋಮಿನ ಮತಕ್ಕಾಗಿ ಈ ಮಟ್ಟಕ್ಕೆ ಇಳಿದಿದೆ. ಈಗಾಗಲೇ ಹಿಂದೂ ಕಾರ್ಯಕರ್ತನ ಬಂಧನ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೈ ಸುಟ್ಟುಕೊಂಡಿದೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಇಂಥ ಬಾಲಿಶ್ ಹೇಳಿಕೆ ನೀಡುವುದು ಸರಿಯಲ್ಲ, ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಹಿಂದೂ ಕಾರ್ಯಕರ್ತನ ಬಂಧನವನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜೋಶಿ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಿಲ್ವಾ? ಶ್ರೀಕಾಂತ್ ಪೂಜಾರಿ ಅವರನ್ನು ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಅರೆಸ್ಟ್ ಮಾಡಿದ್ದಾರಾ? ಈಗಾಗಲೇ ಗಲಭೆ ವಿಚಾರದಲ್ಲಿ ಎ-1, ಎ-3, ಎ-5, ಎ-7 ಆರೋಪಿಗಳು ಬೇಲ್ ಪಡೆದಿದ್ದಾರೆ. ಅಲ್ಲದೇ ಎಫ್ಐಆರ್ ಕಳೆದುಹೋಗಿದೆ. ಆದರೆ ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಗಳಿವೆ ಎಂದು ಹೇಳುತ್ತಾರೆ. ಅವರು ಅಧಿಕಾರಿಯಲ್ಲ, ರಾಜ್ಯದ ಮುಖ್ಯಮಂತ್ರಿ. ಆ ಸ್ಥಾನದಲ್ಲಿದ್ದು ಬಾಲಿಶ್ ಹೇಳಿಕೆ ಕೊಡಬಾರದು ಎಂದು ಕುಟುಕಿದರು.
ಜ.9 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈಗಾಗಲೇ ಶ್ರೀಕಾಂತ್ ಪೂಜಾರಿ ಅವರಿಗೆ ಜಾಮೀನು ಸಿಕ್ಕಿದೆ. ಈ ದಿಸೆಯಲ್ಲಿ ಮುಂದೆ ಹೋರಾಟ ಮಾಡಬೇಕು, ಬೇಡ್ವೋ ಎಂಬ ಬಗ್ಗೆ ಇಂದು ವಿಪಕ್ಷ ನಾಯಕ ಆರ್. ಅಶೋಕ, ಹಾಗೂ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಶ್ರೀಕಾಂತ್ ಪೂಜಾರಿಗೆ ಬಿಜೆಪಿ ಧಾರವಾಡ ಲೋಕಸಭಾ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ ಅಭಿಯಾನಕ್ಕೆ ನೋ ಕಾಮೆಂಟ್ಸ್, ಅದೊಂದು ಸಣ್ಣ ಮಕ್ಕಳ ಹೇಳಿಕೆ ಎಂದರು.
ಮಾಜಿ ಸಚಿವ ವಿ ಸೋಮಣ್ಣ ಮುನಿಸು ವಿಚಾರವಾಗಿ ಪ್ರತಿಕ್ರಿಯಿಸಿ ಈಗಾಗಲೇ ವಿ ಸೋಮಣ್ಣ ನಮ್ಮೊಂದಿಗೆ ಮಾತನಾಡಿದ್ದಾರೆ. ಅವರಿಗೆ ದೆಹಲಿಗೆ ಬಾ ಎಂದು ಹೇಳಿದ್ದೇವೆ. ಅಲ್ಲಿ ನಮ್ಮ ಹೈಕಮಾಂಡ್ ಮಾತನಾಡಿ ಅವರ ಮುನಿಸು ಬಗೆಹರಿಸುತ್ತದೆ ಎಂದು ಹೇಳಿದರು.
ಭಾರತ ಹಿಂದೂ ರಾಷ್ಟ್ರ ಆದ್ರೆ ಪಾಕಿಸ್ತಾನ ರೀತಿ ದಿವಾಳಿ ಆಗುತ್ತದೆ ಎಂದು ಹೇಳಿಕೆ ಕೊಟ್ಟಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ ಅವರು, ಇದು ತುಷ್ಟೀಕರಣದ ಪರಾಕಾಷ್ಠೆ ಆಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್ ದೇಶದಲ್ಲಿ ಜಾತ್ಯತೀತತೆ ಇಲ್ಲ, ಭಾರತದ ಜಾತ್ಯತೀತ ರಾಷ್ಟ್ರ, ಹೀಗಾಗಿ ಇಲ್ಲಿ ಅಂತಹ ಪರಿಸ್ಥಿತಿ ಬರೋದಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂಓದಿ:ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್ನಿಂದ ಮುಕ್ತಿ ಕೊಟ್ಟಿದ್ದೇ ಕಾಂಗ್ರೆಸ್: ದಿನೇಶ್ ಗುಂಡೂರಾವ್