ಹುಬ್ಬಳ್ಳಿ: ನಗರದ ಹೊರವಲಯದಲ್ಲಿನ ಬಡೇಸೋಪಿನ ಫ್ಯಾಕ್ಟರಿಗೆ ಹೋಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರು, ಇಬ್ಬರು ಪತ್ರಕರ್ತರನ್ನ ಬಂಧಿಸಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಿದ್ದ ಪತ್ರಕರ್ತರ ಅಕೌಂಟಿಗೆ ಹಣ ಹಾಕಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನೂ ಬಂಧನ ಮಾಡಲಾಗಿದೆ.
ಬಂಧಿತ ಮೂವರ ಮೇಲೂ ಸೆಕ್ಷನ್ 384 ಪ್ರಕರಣ ದಾಖಲು ಮಾಡಿ, ಕಾರಾಗೃಹಕ್ಕೆ ಕಳುಹಿಸಲಾಗಿದೆ. ಒಂದೇ ಗುರಿ ಪತ್ರಿಕೆಯ ನಿತ್ಯಾನಂದ ಶೆಟ್ಟಿ, ಸ್ಪೀಡ್ ನ್ಯೂಸ್ ಹೆಸರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಂದೀಪ ಬಳ್ಳಾರಿ ಹಾಗೂ ಸಿಸಿಬಿ ಪೊಲೀಸ್ ಪೇದೆ ವಿಜಯ ಮರೆಪ್ಪನವರ ಬಂಧಿತರು.
ಬಡೇಸೋಪು ಫ್ಯಾಕ್ಟರಿಗೆ ಹೋಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಸಮಯದಲ್ಲಿ, ಪತ್ರಕರ್ತರಿಗೆ ಫ್ಯಾಕ್ಟರಿ ಮಾಲೀಕರಿಂದ ಐದು ಸಾವಿರ ಕೊಡಿಸಿ, ಗೊಂದಲ ಬಗೆಹರಿಸಲು ಮುಂದಾಗಿದ್ದ ಪೇದೆಯನ್ನೂ ಆರೋಪಿ ಮಾಡಲಾಗಿದೆ. ಘಟನೆ ಸಂಬಂಧ ಇನ್ಸ್ಪೆಕ್ಟರ್ ಶ್ಯಾಮರಾವ್ ಸಜ್ಜನ ಅವರು ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗೆ ಮಾಹಿತಿ ನೀಡಿ, ಕಾನೂನು ಕ್ರಮ ಜರುಗಿಸಿದ್ದಾರೆ.