ಹುಬ್ಬಳ್ಳಿ: ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಸಮಸ್ಯೆಗಳನ್ನು ಪರಿಹರಿಸಬೇಕಾದ ಮೈತ್ರಿ ಸರ್ಕಾರ ರೆಸಾರ್ಟ್ ಸೇರಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಪ್ರಯುಕ್ತ ಸಂಶಿ ಗ್ರಾಮದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ವೈ, ಮಂತ್ರಿ ಮಂಡಲದ ಸಭೆಯ ಬಳಿಕ ಮುಖ್ಯಮಂತ್ರಿಗಳು ನೇರವಾಗಿ ರೆಸಾರ್ಟ್ಗೆ ಹೋಗಿದ್ದಾರೆ. ಮೈತ್ರಿ ಕೂಟದಲ್ಲಿ ಸಾಕಷ್ಟು ಗೊಂದಲ ಇರುವುದರಿಂದ ಹೀಗೆ ಮಾಡುತ್ತಿದ್ದಾರೆ. ಇವರ ಜೊತೆಗೆ ದೇವೇಗೌಡರೂ ಸಹ ತೆರಳಿದ್ದಾರೆ. ಇಲ್ಲೇ ಗೊತ್ತಾಗುತ್ತಿದೆ, ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ ಯಾರು ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬರ ತಾಂಡವಾಡುತ್ತಿದೆ. ಈ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರೆಸಾರ್ಟ್ ಸೇರಿರುವುದು ಎಷ್ಟು ಸರಿ? ಇದನ್ನು ನೋಡಿದ್ದರೇ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಹಣ, ಹೆಂಡ ಕೊಟ್ಟು ಚುನಾವಣೆ ಗೆಲ್ಲಬಹುದು ಎಂಬುವವರಿಗೆ ಮತದಾರರು ಪಾಠ ಕಲಿಸಬೇಕಿದೆ ಎಂದರು.
ನಮ್ಮ ತಪ್ಪಿನಿಂದಾಗಿ ಸುಲಭವಾಗಿ ಗೆಲ್ಲಬಹುದಾದ ಕೆಲ ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡುತ್ತಿದೆ. ಆದರೆ, ಕಾಂಗ್ರೆಸ್ ಮುಖಂಡರು ಮಾತ್ರ ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿ ಅವರನ್ನು ಜರಿಯುವವರ ಗೌರವ ಕಡಿಮೆ ಆಗುತ್ತಿದೆ ಎನ್ನುವುದು ಅವರಿಗೆ ತಿಳಿಸುವ ಸಮಯ ಬಂದಿದೆ ಎಂದು ಕುಟುಕಿದರು.