ಹುಬ್ಬಳ್ಳಿ : ಮುಂದುವರೆದ ಅನಿರ್ಧಿಷ್ಟ ಅವಧಿಯ ಸಾರಿಗೆ ಮುಷ್ಕರದ ಹಿನ್ನೆಲೆ ಏ.13ರಂದು ಮಂಗಳವಾರ ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೋದಿಂದ 8 ಬಸ್ಸು, ಗ್ರಾಮಾಂತರ 2 ನೇ ಡಿ್ಪೋದಿಂದ 17 ಬಸ್ಗಳು, ಗ್ರಾಮಾಂತರ 3ನೇ ಡಿಪೋದಿಂದ 16, ನವಲಗುಂದ ಡಿಪೋದಿಂದ 2 ಮತ್ತು ಡಿಪೋದಿಂದ 1 ಬಸ್ಸು ಸೇರಿದಂತೆ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಒಟ್ಟು 44 ಬಸ್ಸು ಸಂಚರಿಸಿವೆ.
ಕರ್ತವ್ಯನಿರತ ಸಿಬ್ಬಂದಿಗೆ ವೇತನ ಪಾವತಿ...
ಮುಷ್ಕರದ ಅವಧಿಯಲ್ಲಿ ಅಂದರೆ ಏಪ್ರಿಲ್ 7 ರಿಂದ 10ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ವೇತನ ಪಾವತಿ ಮಾಡಲಾಗಿದೆ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ, ಐದು ಡಿಪೋಗಳು ಸೇರಿದಂತೆ ಒಟ್ಟು 2110 ಸಿಬ್ಬಂದಿ ಇದ್ದಾರೆ. ಅವರಲ್ಲಿ 733 ಸಿಬ್ಬಂದಿ ಮುಷ್ಕರದ ಅವಧಿಯಲ್ಲಿ ನಿರಂತರವಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ವೇತನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಿನಾಂಕ 11 ರಿಂದ ಕೆಲಸಕ್ಕೆ ಬಂದಿರುವ ಸಿಬ್ಬಂದಿಗಳ ವೇತನವನ್ನು ಸಹ ಆದ್ಯತೆಯ ಮೇಲೆ ಬಿಡುಗಡೆ ಮಾಡಲಾಗುತ್ತದೆ. ದೊಡ್ಡ ಹಬ್ಬ ಯುಗಾದಿಯ ಸಮಯದಲ್ಲಿ ಮುಷ್ಕರದಿಂದಾಗಿ ಸಾರ್ಜನಿಕರಿಗೆ ತೀವ್ರ ತೊಂದರೆಯಾಗಿದೆ ಮತ್ತು ಸಂಸ್ಥೆಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯವೂ ನಿಂತುಹೋಗಿದೆ. ಅದ್ದರಿಂದ ಮುಷ್ಕರ ಕೈ ಬಿಟ್ಟು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಅವರು ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.
ಕೆಲಸಕ್ಕೆ ಗೈರಾದ 26 ತರಬೇತಿ ಸಿಬ್ಬಂದಿ ವಜಾ...
ಮುಷ್ಕರ ಆರಂಭದ ದಿನದಿಂದ ಇಂದಿನವರೆಗೂ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ನೇಮಕಾತಿ ಪ್ರಾಧಿಕಾರಸ್ಥರೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಆದೇಶ ಹೊರಡಿಸಿದ್ದಾರೆ.
ಮುಷ್ಕರ ಕೈ ಬಿಟ್ಟು ಕೊಡಲೇ ಕರ್ತವ್ಯಕ್ಕೆ ಹಾಜರಾಗಿ. ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ಎಂದು ತರಬೇತಿ ನೌಕರರಿಗೆ ಶೋಕಾಸ್ ನೋಟಿಸ್ ಮತ್ತು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ಸಹ ಇಂದಿನವರೆಗೆ ಕೆಲಸಕ್ಕೆ ಹಾಜರಾಗದೇ ಇರುವ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಇವರಲ್ಲಿ 15 ಚಾಲಕರು, 8 ಚಾಲಕ ಕಂ ನಿರ್ವಾಹಕರು,ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಗುರುವಾರ ಗ್ರಾಮಾಂತರ 2ನೇ ಘಟಕದ ಬಸ್ಸು ಡಿಪೋದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುವಾಗ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ವಸತಿ ಗೃಹಗಳ ಹತ್ತಿರ ಬಸ್ ತಡೆದು ಕರ್ತವ್ಯನಿರತ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡ ತಿಳಿಸಿದ್ದಾರೆ ತಿಳಿಸಿದ್ದಾರೆ.
ದೂರು ದಾಖಲು..
ಸೋಮವಾರ ಧಾರವಾಡದಿಂದ ಬಾಗಲಕೋಟೆಗೆ ಹೋಗುತ್ತಿದ್ದ ಬಸ್ಸನ್ನು ತಡೆದು ಕರ್ತವ್ಯನಿರತ ಚಾಲಕ- ನಿರ್ವಾಹಕರಿಗೆ ನಿಂದಿಸಿ, ಕೆಲಸಕ್ಕೆ ಅಡ್ಡಿಪಡಿಸಿದ ಘಟನೆ ಹಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಹೆಬಸೂರಿನಲ್ಲಿ ಜರುಗಿದೆ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸದರಿ ಘಟನೆಯಲ್ಲಿ ಭಾಗಿಯಾಗಿರುವ ಸಂಸ್ಥೆಯ ಒಬ್ಬ ಸಿಬ್ಬಂದಿಯನ್ನು ಗುರುತಿಸಲಾಗಿದ್ದು, ಇತರರನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸಾರ್ವಜನಿಕರಿಗೆ ಅಗತ್ಯ ಸಾರಿಗೆ ಸೇವೆ ಕಲ್ಪಿಸುವುದಕ್ಕಾಗಿ ಸಂಚರಿಸುತ್ತಿರುವ ಬಸ್ಸುಗಳನ್ನು ಮಾರ್ಗ ಮಧ್ಯದಲ್ಲಿ ತಡೆಯುವುದಾಗಲಿ, ಕರ್ತವ್ಯನಿರತ ಸಾರಿಗೆ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿಪಡಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಇಂಥ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಸಿಬ್ಬಂದಿಗಳಿಗೆ ಅವರು ಎಚ್ಚರಿಸಿದ್ದಾರೆ.