ಹುಬ್ಬಳ್ಳಿ: ಹತ್ತು ವರ್ಷಗಳ ಬಳಿಕ ನಗರದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಭರದ ಸಿದ್ಧತೆ ನಡೆದಿದೆ. ನಗರದೆಲ್ಲೆಡೆ ಬಿಜೆಪಿ ಬಾವುಟ ಸೇರಿದಂತೆ ಗಣ್ಯರ ಸ್ವಾಗತಕ್ಕೆ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.
ಇಲ್ಲಿಯ ಚೆನ್ನಮ್ಮ ವೃತ್ತ, ಹೊಸೂರ ಸರ್ಕಲ್, ಕ್ಲಬ್ ರೋಡ್, ಲ್ಯಾಮಿಂಗ್ಟನ್ ರಸ್ತೆ, ಗೋಕುಲ್ ರಸ್ತೆ, ಸ್ಟೇಷನ್ ರಸ್ತೆ ಸೇರಿ ಬಹುತೇಕ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಉಸ್ತುವಾರಿ ಅರುಣಸಿಂಗ್, ಕೇಂದ್ರ ಸಚಿವರಾದ ರಾಜೀವ ಚಂದ್ರಶೇಖರ, ಪ್ರಲ್ಹಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಂ ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ನೂರಾರು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸ್ವಚ್ಛತಾ ಕಾರ್ಯವೂ ಭರದಿಂದ ನಡೆದಿವೆ.
ಇನ್ನೊಂದೆಡೆ ಜಿಲ್ಲೆಯ ಬಿಜೆಪಿ ಮುಖಂಡರು ಸೇರಿದಂತೆ ಗಣ್ಯರ ನೇತೃತ್ವದಲ್ಲಿ ನಿರಂತರ ಸರಣಿ ಪೂರ್ವಭಾವಿ ಸಭೆಗಳನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಜಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಿರಂತರ ಸಭೆಗಳನ್ನು ನಡೆಸಿ ಮಾರ್ಗದರ್ಶನ ನೀಡಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹುಮ್ಮಸ್ಸು ತುಂಬಲಾಗುತ್ತಿದೆ. ವಿಶೇಷ ತಂಡಗಳನ್ನು ರಚಿಸಿ ಗಣ್ಯರಿಗೆ ಸ್ವಾಗತ, ಆತಿಥ್ಯ ನೀಡಲು ಸಿದ್ಧತೆ ಮಾಡಲಾಗುತ್ತಿದೆ.
ಆದ್ರೆ, ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಲು ನಿರ್ಬಂಧವಿದೆ. ಅದೆಲ್ಲವನ್ನು ಉಲ್ಲಂಘಿಸಿ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಜನಸಾಮಾನ್ಯರಿಗೆ ಒಂದು ನ್ಯಾಯ, ರಾಷ್ಟ್ರೀಯ ಪಕ್ಷಗಳಿಗೆ ಒಂದು ನ್ಯಾಯವಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಚೆನ್ನಮ್ಮ ವೃತ್ತದಲ್ಲಿಯೂ ರಾಜಕೀಯ ಪ್ರಚಾರ : ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಅಂದರೆ ಎಲ್ಲರಿಗೂ ಗೌರವ ಭಾವನೆ ಬರುತ್ತದೆ. ಆದರೆ, ನಮ್ಮ ರಾಜಕೀಯ ಪಕ್ಷಗಳು ಮಾತ್ರ ಇಂತಹ ಮಹಾನ್ ವ್ಯಕ್ತಿಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.
ನಾಳೆ ಹಾಗೂ ನಾಡಿದ್ದು, ನಡೆಯುವ ಬಿಜೆಪಿ ಕಾರ್ಯಕಾರಣಿ ಸಭೆ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ತುಂಬಾ ಬಿಜೆಪಿ ಬ್ಯಾನರ್ ರಾರಾಜಿಸುತ್ತಿವೆ. ಆದರೆ, ಬಿಜೆಪಿ ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿಯೇ ಬಿಜೆಪಿ ಬಾವುಟವನ್ನು ನೆಟ್ಟು ರಾಜಕೀಯ ಪ್ರಚಾರ ಗಿಟ್ಟಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಕೀಯ ಪಕ್ಷಕ್ಕೆ ಸೀಮಿತವಾಗುವಂತೆ ಮಾಡುತ್ತಿದ್ದಾರೆ.
ಅವಳಿನಗರದ ತುಂಬಾ ಸಾಕಷ್ಟು ಫ್ಲೆಕ್ಸ್, ಬ್ಯಾನರ್ ಹಾಕಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಚೆನ್ನಮ್ಮ ವೃತ್ತದಲ್ಲಿಯೇ ಇಂತಹದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.