ಹುಬ್ಬಳ್ಳಿ:ಸಮ್ಮಿಶ್ರ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಆಗಿದ್ದು, ಯಾವ ಸಮಯದಲ್ಲಿ ಬೇಕಾದರೂ ಬ್ಲಾಸ್ಟ್ ಆಗಬಹುದು ಹಾಗಾಗಿಯೇ ಮೈತ್ರಿ ಸರ್ಕಾರದ ಮಂತ್ರಿಗಳು ಹೆದರಿ ಕುಳಿತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಯಲ್ಲಿರುವರು ಪರಸ್ಪರ ಬೆನ್ನಿಗೆ ಚೂರಿ ಇರಿಯುವಂತವರು. ಅವರೇ ಆಜುಬಾಜು ಕುಳಿತು ಅಧಿಕಾರ ನಡೆಸುತ್ತಿದ್ದಾರೆ. ಅಂತವರ ಆಡಳಿತ ಎಷ್ಟು ದಿನ ನಡೆಯುತ್ತದೆ ಎಂದು ಪ್ರಶ್ನಿಸಿದ್ರು. ಇಲ್ಲಿ ಒತ್ತಾಯ ಪೂರ್ವಕವಾಗಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕರಾದ ರೋಷನ್ ಬೇಗ್, ರಾಮಲಿಂಗ ರೆಡ್ಡಿ ಸರ್ಕಾರ ಬೀಳುವ ಹಂತ ತಲುಪಲು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಕಾರಣ ಎಂದು ಹೇಳುತ್ತಿದ್ದಾರೆ, ನಾನು ಕೂಡ ಈ ಹಿಂದೆಯೇ ಇದನ್ನು ಹೇಳಿದ್ದೇನೆ ಎಂದರು.
ಮೈತ್ರಿ ಸರ್ಕಾರದಲ್ಲಿ ಆಡಳಿತ ನಡೆಸುವವರೇ ಇಲ್ಲ. ಒಬ್ಬರಿಗೊಬ್ಬರು ಬೈಯುವುದರಲ್ಲೇ ಕಾಲಕಳೆಯುತ್ತಿದ್ದು, ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಹೆಚ್.ಡಿ.ದೇವೇಗೌಡರು ಕಾರಣ, ನಿಖಿಲ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ನೀಡಲಿ. ಮೈಸೂರಿನಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕಾರಣ ಎಂದು ಹೇಳುತ್ತಿದ್ದು, ಇದರಿಂದಲೇ ತಿಳಿಯುತ್ತೆ ಸರ್ಕಾರ ಇಲ್ಲ ಅಂತ ಹೇಳಿದರು. ಇನ್ನು, ಪಾರ್ಟಿ ಎಂಬುದು ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದ ಜಗದೀಶ್ ಶೆಟ್ಟರ್, ಆದಷ್ಟು ಬೇಗ ಕಾಂಗ್ರೆಸ್ ಪಕ್ಷ ವಿಸರ್ಜನೆ ಆಗುವುದು ಗ್ಯಾರಂಟಿ. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜನೆ ಆಗಬೇಕು ಅಂದಿದ್ರು. ಆ ಎಲ್ಲಾ ಲಕ್ಷಣಗಳೆಲ್ಲಾ ಈಗ ಕಾಣುತ್ತಿವೆ ಎಂದರು.