ಹುಬ್ಬಳ್ಳಿ: ಕಾಂಗ್ರೆಸ್ಸಿಗರದು ರಾಜಕೀಯ ಪ್ರೇರಿತ ಪ್ರತಿಭಟನೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ನಾವು ಕಾಂಗ್ರೆಸ್ ನವರಿಗೆ ಯಾವುದಕ್ಕೂ ಅಡಚಣೆ ಮಾಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
18 ನೇ ತಾರೀಖಿನಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ನೆಹರೂ ಮೈದಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ಅಮಿತ್ ಶಾ ಆಗಮನದ ಹಿನ್ನೆಲೆ ಕಾಂಗ್ರೆಸ್ನಿಂದ ಗೋ ಬ್ಯಾಕ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದರಿಂದ ನಮಗೇನು ತೊಂದರೆ ಇಲ್ಲ. ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ನಡೆಯಲಿದೆ. ಅಹಿತಕರ ಘಟನೆ ನಡೆಯುವಂತೆ ಕಾಂಗ್ರೆಸ್ ಏನಾದರೂ ಪ್ರತಿಭಟನೆ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹರಿಹರದಲ್ಲಿ ಸಿಎಂ ರಾಜೀನಾಮೆ ಬೆದರಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತಂತೆ ಈಗಾಗಲೇ ಸಿಎಂ, ನಿರಾಣಿ ಹಾಗೂ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಅದನ್ನು ಬೆಳೆಸುವ ಅಗತ್ಯವಿಲ್ಲ ಎಂದ ಅವರು,ಸಂಪುಟ ವಿಸ್ತರಣೆ ವಿಚಾರ ಸಿಎಂಗೆ ಬಿಟ್ಟದ್ದು ಎಂದರು.
ರಾಜ್ಯದಲ್ಲಿ ಉಗ್ರರ ಚಟುವಟಿಕೆ ಕುರಿತು ಪ್ರತಿಕ್ರಿಯೆ ನೀಡಿ, ತಮಿಳುನಾಡಿನಲ್ಲಿ ಒಂದು ತಂಡ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿತ್ತು. ಈ ಕುರಿತಂತೆ ಮಾಹಿತಿ ಸಿಕ್ಕ ನಂತರ ರಾಜ್ಯದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಬೇರೆ ರಾಜ್ಯದಿಂದ ಕೇರಳದ ಕನ್ಯಾಕುಮಾರಿಗೆ ಹೋಗಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಉಗ್ರರ ಜಾಲವನ್ನ ಸಂಪೂರ್ಣ ಭೇದಿಸುವಲ್ಲಿ ರಾಜ್ಯದ ಪೊಲೀಸರು ಶ್ರಮಿಸಲಿದ್ದಾರೆ ಎಂದರು.