ಧಾರವಾಡ: ವಿನಯ್ ಕುಲಕರ್ಣಿ ಪರವಾಗಿ ಪ್ರಚಾರ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಪೋಸ್ಟ್, ಅವರ ಫೋಟೋ ಹಾಕಿಕೊಂಡವರಿಗೆ ಕ್ಷೇತ್ರದಲ್ಲಿ ಹೆದರಿಸುವ ಕೆಲಸ ಆಗುತ್ತಿದೆ ಎಂದು ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಆರೋಪಿಸಿದ್ದಾರೆ.
ಈ ಕುರಿತು ಕೊಟೂರ ಗ್ರಾಮದಲ್ಲಿ ಮನೆ, ಮನೆ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ಹೆದರಿಸುವ ಹಾಗೂ ಬೆದರಿಸುವ ಕಾರ್ಯ ಈಗಿನಿಂದಲ್ಲ. ಮೊದಲಿನಿಂದಲೂ ನಡೆಯುತ್ತಲೇ ಇದೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರು, ಪಾಲಿಕೆ ಸದಸ್ಯರಿಗೆ ತಾರತಮ್ಯ ಮಾಡಲಾಗುತ್ತಿದೆ. ಈ ಚುನಾವಣೆ ಬಂದಾಗ ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಶಿವಲೀಲಾ ದೂರಿದರು.
ಹಿರಿಯರು, ಮಹಿಳೆಯರು ಯುವಕರು ಸೇರಿದಂತೆ ಎಲ್ಲರೂ ವಿನಯ್ ಕುಲಕರ್ಣಿ ಅವರಿಗೆ ಸಪೋರ್ಟ್ ಮಾಡಿ ಎಂದು ನಮ್ಮ ಜೊತೆ ಮತ ಕೇಳಲು ಬಂದಿದ್ದಾರೆ. ವಿನಯ್ ಅವರಿಗೆ ಜಿಲ್ಲೆಯೊಳಗೆ ಪ್ರವೇಶ ಇಲ್ಲ. ಆದ್ರೆ ಜಿಲ್ಲೆಯ ಗಡಿ ಭಾಗದಲ್ಲೇ ಅವರು ಇದ್ದಾರೆ. ಅಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕ್ಷೇತ್ರದ ಎಲ್ಲೆಡೆ ವಿನಯ್ ಕುಲಕರ್ಣಿ ಅವರ ಪರವಾದ ಅಲೆ ಇದೆ. ಜನ ವಿನಯ್ ಕುಲಕರ್ಣಿ ಅವರತ್ತ ಚಿತ್ತ ನೆಟ್ಟಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಅವರಿದ್ದರೆ ನಮ್ಮ ಕೆಲಸಗಳಾಗುತ್ತವೆ. ಅವರನ್ನೇ ಈ ಬಾರಿ ಗೆಲ್ಲಿಸುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಕ್ಷೇತ್ರದ ಜನರಿಂದ ನಮಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ನನಗೆ ಹಾಗೂ ನನ್ನ ಮಕ್ಕಳಾದ ವೈಶಾಲಿ, ಹೇಮಂತನಿಗೆ ಜನ ಸ್ಪಂದಿಸಿ ಪ್ರೀತಿಯಿಂದ ಕಾಣುತ್ತಿದ್ದಾರೆ ಎಂದು ಶಿವಲೀಲಾ ಕುಲಕರ್ಣಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಮಾಜದ ಶಾಂತಿ ಕದಡುವ, ಕೋಮುಗಲಭೆ ಸೃಷ್ಟಿಸುವ ಸಂಘಟನೆ ನಿಷೇಧ ಮಾಡಿದರೆ ತಪ್ಪೇನು?: ಸಿದ್ದರಾಮಯ್ಯ