ಧಾರವಾಡ: ವಿಧಾನಸಭೆಗೆ ತನ್ನದೇ ಆದ ಗೌರವ ಇದ್ದು, ಅಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಭೆಯಲ್ಲಿ ಬಳಸುವ ಶಬ್ದಗಳು ಹಿತವಾಗಿರಬೇಕು ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಮಾತನಾಡುವಾಗ ಅವರ ಹಿರಿಯತನ ನೋಡಬೇಕು. ಅಲ್ಲಿ ಹಿರಿಯರು-ಕಿರಿಯರು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಧ್ಯಪ್ರದೇಶ ಸರ್ಕಾರದ ಹೈಡ್ರಾಮ ಕುರಿತು ಮಾತನಾಡಿದ ಅವರು, ಒಬ್ಬ ಶಾಸಕ ತಾನು ಯಾವ ಪಕ್ಷದಿಂದ ಆರಿಸಿ ಬಂದನೋ ಆ ಪಕ್ಷಕ್ಕೆ ಬದ್ಧನಾಗಿರಬೇಕು. ಅಷ್ಟೇ ಅಲ್ಲದೆ, ಬೇರೆ ಪಕ್ಷಕ್ಕೆ ಹೋಗಬೇಕೊ ಬೇಡವೊ ಎಂದು ಆತ್ಮಾವಲೋಕನ ಮಾಡಬೇಕು ಎಂದರು.
ಮಹದಾಯಿ ಯೋಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ಬಿಜೆಪಿಗೆ ಅಷ್ಟೇ ಸೀಮಿತವಲ್ಲ, ಎಲ್ಲಾ ರೈತ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಸಾವಿರಕ್ಕೂ ಹೆಚ್ಚು ಸಂಘಟನೆಗಳು ಇದಕ್ಕೆ ಬೆಂಬಲ ನೀಡಿವೆ. ಇದರ ಕೃತಜ್ಞತೆ ಎಲ್ಲರಿಗೆ ಸಲ್ಲಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದರು.