ಧಾರವಾಡ: ಖಾಸಗಿ ಚಾನೆಲ್ಗಳಲ್ಲಿ ಬರುವ ಸೀರಿಯಲ್ಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ನಾಮ ಹಾಕಿದ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ.
ಆಸಾಮಿವೊಬ್ಬ ಬಾಲ ನಟರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿ, ಹಲವರ ಬಳಿ ಹಣ ಪೀಕರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಇನ್ನು ಜಾಹೀರಾತು ನಂಬಿ ಹಣ ನೀಡಿದ ಜನ ಪೇಚಿಗೆ ಸಿಲುಕಿದ್ದಾರೆ.
ಪ್ರದೀಪ ಎನ್ನುವ ವ್ಯಕ್ತಿ ಮೋಸ ಮಾಡಿದ ಆರೋಪಿ. ಜಾಹೀರಾತು ನಂಬಿ ಬಂದ ಹಲವರಿಗೆ ಫೇಕ್ ಅಕೌಂಟ್ ನಂಬರ್ ನೀಡಿ ತನ್ನ ಖಾತೆಗೆ ಹಣ ಸಂದಾಯ ಮಾಡಿಸಿಕೊಂಡಿದ್ದಾನೆ. ಫೋನ್ ಮಾಡಿದ ಪ್ರತಿಯೊಬ್ಬರಿಂದಲೂ ಸ್ಫೂರ್ತಿ ಎನ್ನುವ ಧಾರಾವಾಹಿ ಮಾಡುತ್ತಿದ್ದು, ಅದರಲ್ಲಿ ಅವಕಾಶ ನೀಡುವುದಾಗಿ 20 ರಿಂದ 50 ಸಾವಿರದವರೆಗೂ ಹಣ ಪಡೆದು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಹೀಗೆ ಧಾರವಾಡ ನಗರವೊಂದರಲ್ಲಿ 10 ರಿಂದ 15 ಜನರ ಬಳಿ ಹಣ ಪಡೆದು ವಂಚನೆಗೈದಿದ್ದಾನೆ ಎನ್ನಲಾಗಿದೆ. ಹಣ ನೀಡಿ ಒಂದು ವರ್ಷದ ನಂತರವೂ ಯಾವುದೇ ಅವಕಾಶ ನೀಡದೆ ಇದ್ದಾಗ ಇದರ ಬಗ್ಗೆ ಹಣ ನೀಡಿದವರು ಪ್ರಶ್ನೆ ಮಾಡುತ್ತಿದ್ದಂತೆ ಫೋನ್ ಸ್ವಿಚ್ ಆಪ್ ಮಾಡಿದ್ದಾನೆ.
ನಾನು ಬೆಂಗಳೂರು ಮೂಲದವನೆಂದು ಹೇಳಿಕೊಂಡಿದ್ದ ವ್ಯಕ್ತಿ ಪ್ರದೀಪ, ಪ್ರಕಾಶ ಮತ್ತು ಪ್ರಮೋದ್ ಎನ್ನುವ ಬೇರೆ ಬೇರೆ ಹೆಸರುಗಳಿಂದ ತನ್ನನ್ನು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವ್ಯಕ್ತಿ ಧಾರವಾಡದ ವಿವಿಧ ಬಡವಾಣೆಯ ಜನರಿಗೂ ಈತ ನಾಮ ಹಾಕಿದ್ದು ಬೆಳಕಿಗೆ ಬಂದಿದೆ.
ಮೋಸ ಹೋದವರು ಪೊಲೀಸರಿಗೆ ದೂರು ನೀಡುತ್ತೇವೆ ಮತ್ತು ಮಾಧ್ಯಮಗಳ ಬಳಿ ಹೋಗುವುದಾಗಿ ತಿಳಿಸಿದಾಗ, ಪ್ರದೀಪ್ ಹಣ ನೀಡಿದವರಿಗೆ ಬೆದರಿಕೆ ಕೂಡಾ ಹಾಕಿದ್ದಾನೆ. ಇನ್ನು ಈ ವ್ಯಕ್ತಿಗೆ ದರ್ಪಕ್ಕೆ ಹೆದರಿ ಕೆಲವರು ಪೊಲೀಸ್ ಠಾಣೆಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಈ ಬಗ್ಗೆ ದೂರು ಕೊಡಲು ಹೋದ್ರೆ ಪೊಲೀಸರು ಸಹ ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಠಾಣೆಗೆ ಅಲೆದಾಡಿ ಬೇಸತ್ತ ಜನ ನ್ಯಾಯ ಸಿಗದೇ ಹತಾಶರಾಗಿದ್ದಾರೆ. ಇದರಿಂದ ಬಡ್ಡಿಯಲ್ಲಿ ಸಾಲ ಪಡೆದು ಹಣ ನೀಡಿದ ಜನರು ಮಾತ್ರ ಕಂಗಾಲಾಗಿ, ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ