ಹುಬ್ಬಳ್ಳಿ: ಕೆಲವರು ಮುಂದಿನ ಸಿಎಂ ಆಗುವ ಬಗ್ಗೆ ಮಾತನಾಡುವುದು ತಪ್ಪು. ಎಲೆಕ್ಷನ್ ಆಗಿ ಬಹುಮತ ಬಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ಆಗುತ್ತದೆ. ತಮ್ಮ ತಮ್ಮ ನಾಯಕರ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಯೇ ವಿನಃ ಅದು ಬಣವಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಗೊಂದಲ ಇದೆ. ಅದಕ್ಕೆ ಯತ್ನಾಳ್ ಮಾತನಾಡುತ್ತಾರೆ. ಅವರ ನಾಯಕರ ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ. ರಾಜ್ಯದಲ್ಲಿ ವಿಪಕ್ಷ ಸಮರ್ಥವಾಗಿದೆ ಎಂದರು.
ಭ್ರಷ್ಟಾಚಾರದ ಗಂಗೋತ್ರಿ ಅಂದರೆ ಅದು ಭಾರತೀಯ ಜನತಾ ಪಾರ್ಟಿ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರವಾಗಿಲ್ಲ ಎಂದಿದ್ದರು. ಆದರೆ, ಸದ್ಯ ಫ್ರಾನ್ಸ್ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದು, ಇವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏನಾಗಿದೆ?. ಯುಪಿಎ ಸರ್ಕಾರದಲ್ಲಿ ಗ್ಯಾಸ್ ಬೆಲೆ 5 ರೂ ಏರಿಕೆಯಾದರೆ ಬಿಜೆಪಿ ಮಹಿಳಾ ಸಂಸದೆಯರು ತಲೆ ಮೇಲೆ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಇವಾಗ ಎಲ್ಲಿದ್ದಾರೆ? ಅವರು ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಶಾಸಕ ರಾಮಪ್ಪ ಪುತ್ರಿ ವಿವಾಹದಲ್ಲಿ ಕೋವಿಡ್ ನಿಯಮ ಮಾಯ: ಎಫ್ಐಆರ್ ದಾಖಲು