ಹುಬ್ಬಳ್ಳಿ : ಮಹಾದಾಯಿ ಕಿಚ್ಚು ಮತ್ತೆ ತೀವ್ರ ಸ್ವರೂಪ ಪಡೆಯುವುದು ನಿಶ್ಚಿತವಾಗಿದೆ. ಉತ್ತರಕರ್ನಾಟಕ ಭಾಗದಲ್ಲಿ ಕುಡಿಯೋ ನೀರಿನ ಹೋರಾಟ ಬಲಗೊಳ್ಳಲಿದೆ. ಈ ಬಾರಿ ಉಗ್ರ ಹೋರಾಟಕ್ಕೆ ರೈತ ಸಂಘಟನೆಗಳು ಸಿದ್ಧತೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿವೆ.
ಈ ಭಾಗದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ ಈ ಮಹಾದಾಯಿ ಕುಡಿಯೋ ನೀರಿನ ಯೋಜನೆ. ಕಳೆದ ಬಾರಿ ಹೋರಾಟಕ್ಕೆ ಸಿನಿಮಾ ರಂಗ ಮೊದಲು ಮಾಡಿ ಹಲವು ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆದಿತ್ತು.
ಆದರೆ, ಈಗ ಮತ್ತೊಮ್ಮೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಈಗಾಗಲೇ ನ್ಯಾಯಾಧೀಕರಣ ತೀರ್ಪು ಬಂದು ಸುಮಾರು ತಿಂಗಳಾದರೂ ಈವರೆಗೂ ಯಾವುದೇ ರೀತಿಯಲ್ಲಿ ಕಾಮಗಾರಿ ಆರಂಭಗೊಂಡಿಲ್ಲ. ಅಲ್ಲದೆ ಉತ್ತರ ಕರ್ನಾಟಕ ಹಲವಾರು ಬೇಡಿಕೆಗಳನ್ನು ಹೊತ್ತು ಈ ಬಾರಿ ಹೋರಾಟಕ್ಕೆ ರೈತ ಮುಖಂಡ ವಿರೇಶ್ ಸೊರಬದಮಠ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ.
ಮಹಾದಾಯಿ ಕಾಮಗಾರಿ ವಿಳಂಬವಾದಲ್ಲಿ ಪಾದಯಾತ್ರೆ ಮಾಡುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಉ.ಕ ಅಭಿವೃದ್ಧಿ ಹಾಗೂ ಮಹಾದಾಯಿ ಯೋಜನೆ ಈ ತಿಂಗಳು ಒಳಗಾಗಿ ಪ್ರಾರಂಭ ಮಾಡಬೇಕು. ವಿಳಂಬವಾದಲ್ಲಿ ಮಾರ್ಚ್ ತಿಂಗಳಿನಲ್ಲಿ ನರಗುಂದ ವೇದಿಕೆ ವತಿಯಿಂದ ಹೋರಾಟ ಮಾಡುವುದು ನಿಶ್ಚಿತವಾಗಿದೆ. ಮಹಾದಾಯಿಗೆ ಸಂಬಂಧಿಸಿದಂತೆ ತೀರ್ಪು ಬಂದು 3 ವರ್ಷ ಕಳೆದಿದ್ದರೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.
1600 ಕೋಟಿಗಿಂತಲೂ ಹೆಚ್ಚಿನ ಅನುದಾನ ಕಾಯ್ದರಿಸಿದರೂ ಆರಂಭವಾಗಿಲ್ಲ. ಅಲ್ಲದೇ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರವಾಗಿದೆ. ರೈತರಿಗೆ 10 ಸಾವಿರ ಕೋಟಿ ರೂ.ಗಳನ್ನು ಶಾಶ್ವತ ಖರೀದಿ ಕೇಂದ್ರಕ್ಕೆ ಕಾಯ್ದಿರಿಸಬೇಕು. ಕೃಷಿಗಾಗಿ ಬಜೆಟನಲ್ಲಿ 10 ಸಾವಿರ ಕೋಟಿ ಮೀಸಲು ಸೇರಿದಂತೆ ಹಲವು ವಿಷಯ ಇಟ್ಟುಕೊಂಡು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಯೋಜನೆ ಚಾಲನೆಗೆ ರೈತ ಸಮುದಾಯ ಹೋರಾಟಕ್ಕೆ ಅಣಿಯಾಗುತ್ತಿದೆ. ಸರ್ಕಾರ ಇದನ್ನು ಯಾವ ರೀತಿ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬೊಮ್ಮಾಯಿ ಕೊಡ್ತಾರಾ ಚಾಮರಾಜನಗರಕ್ಕೆ ಮಿಠಾಯಿ.. ರಾಜ್ಯ ಬಜೆಟ್ ಮೇಲೆ ಜನರ ನಿರೀಕ್ಷೆಗಳೇನು?