ಹುಬ್ಬಳ್ಳಿ: ಹು-ಧಾ ಮಹಾನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಅವಳಿನಗರ ಮತ್ತಷ್ಟು ಸುಂದರಗೊಳ್ಳಲಿದೆ. ಕೇಂದ್ರೀಯ ಬಸ್ ನಿಲ್ದಾಣಕ್ಕೆ ಹೊಸ ಮೆರಗು ಸಿಗಲಿದೆ.
ವಾಣಿಜ್ಯ ನಗರಿಯ ಹೃದಯ ಭಾಗದಲ್ಲಿರುವ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಅಂತೂ ಇಂತು ಕಾಲ ಕೂಡಿ ಬಂದಿದ್ದು, ಸ್ಮಾರ್ಟ್ ಸಿಟಿಯ 30 ಕೋಟಿ ಅನುದಾನದಲ್ಲಿ ಹೊಸ ರೂಪ ಪಡೆಯಲಿದೆ. ದಿನಕ್ಕೆ ಸಾವಿರಾರು ಜನರು ಓಡಾಡುತ್ತಿರುವ ಕೇಂದ್ರಿಯ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿತ್ತು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಯಲ್ಲಿ ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿದೆ.
ಈಗಾಗಲೇ ಡಿಪಿಆರ್ ಹಂತದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವೊಂದು ಡಿಸೈನ್ ತಿದ್ದುಪಡಿಗೆ ಕೇಂದ್ರ ತಾಂತ್ರಿಕ ಸಮಿತಿಗೆ ಕಳಿಸಲಾಗಿದ್ದು, ಇನ್ನೂ ಮೂರು ನಾಲ್ಕು ದಿನಗಳಲ್ಲಿ ಹಳೇ ಬಸ್ ನಿಲ್ದಾಣದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು.
ಈಗಾಗಲೇ ಸ್ಮಾರ್ಟ್ ಸಿಟಿಯ ಕಾಮಗಾರಿ ಬಹುತೇಕ ವಿಳಂಬವಾಗಿದ್ದು, ಬಸ್ ನಿಲ್ದಾಣವನ್ನು ತೆರವುಗೊಳಿಸಿ ಮತ್ತಷ್ಟು ವಿಳಂಬ ಮಾಡಿದರೆ ಸಾರ್ವಜನಿಕರು ಮಳೆಗಾಲದ ಸಂದರ್ಭದಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಸ್ಮಾರ್ಟ್ ಸಿಟಿ ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.