ಹುಬ್ಬಳ್ಳಿ: ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಜನ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಎರಡು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಅತಿವೃಷ್ಟಿಯ ಗಂಭೀರತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಆಗಿದೆ. ಧಾರವಾಡ ಜಿಲ್ಲೆಯಲ್ಲಿ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. 21 ಹಳ್ಳಿಗಳು ಜಲಾವೃತವಾಗಿವೆ. ಮೂರು ಜನ ಮೃತಪಟ್ಟಿದ್ದಾರೆ. 98 ಜಾನುವಾರು ಮೃತಪಟ್ಟಿವೆ. 3,555 ಮನೆಗಳು ಕುಸಿದ್ದಿದ್ದು, 1,500 ಮನೆಗಳಿಗೆ ಪರಿಹಾರ ನೀಡಲಾಗಿದೆ. 85ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಬಂದ 1 ಸಾವಿರ ಕೋಟಿ ಅನುದಾನ ನಮ್ಮ ಬಳಿ ಇದೆ. ಆದರೆ, ಕೇವಲ 60 ಕೋಟಿ ಖರ್ಚಾಗಿದೆ. ಈ ಹಣವನ್ನು ರಸ್ತೆಗಳ ಅಭಿವೃದ್ಧಿ ಬಳಸಲು ಸೂಚಿಸಲಾಗಿದೆ. ರಾಜ್ಯ, ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಆರ್ಥಿಕ ನೆರವು ಸಿಗಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಎರಡು ಮೂರು ದಿನದಲ್ಲಿ ಕೇಂದ್ರದ ನಾಯಕರ ಭೇಟಿ ಮಾಡಿ ಪ್ರವಾಹ ಸ್ಥಿತಿಯನ್ನು ಮನವರಿಕೆ ಮಾಡುತ್ತೇನೆ ಎಂದೂ ಸಿಎಂ ಇದೇ ವೇಳೆ ಹೇಳಿದರು.
ರಾಜ್ಯದ ಆರ್ಥಿಕ ಸ್ಥಿತಿಯನ್ನು ದೇವರು ಕಾಪಡಬೇಕು. ಕೇಂದ್ರಕ್ಕೆ ಎಷ್ಟು ನೆರವು ಕೇಳಬೇಕು ಎಂಬುದನ್ನು ಇನ್ನು ತೀರ್ಮಾನವಾಗಿಲ್ಲ. ಹಾನಿಯ ಸ್ಪಷ್ಟ ವರದಿ ಕೈ ಸೇರಿದ ಮೇಲೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಗದಗದಲ್ಲಿ ನೆರೆ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ನೆರೆ ಸಂತ್ರಸ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದೇ ಆಗಿದ್ದಲ್ಲಿ ನಾನೇ ಅಂತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.
ನೆರೆ ಸಂತ್ರಸ್ತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ ಮತ್ತೆ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ನಮ್ಮ ಶಾಸಕರು, ಸಂಸದರು ಎಲ್ಲರೂ ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.