ಧಾರವಾಡ: ರಾಜ್ಯ ಸರ್ಕಾರದ ಬಗ್ಗೆ ಮಧ್ಯಪ್ರದೇಶದಲ್ಲಿ ಮೋದಿ ನೀಡಿದ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೆಡಿಕಲ್ ರಿಲೀಫ್ ಸ್ಕೀಮ್ನಲ್ಲಿ ಒಂದೇ ಮೊಬೈಲ್‌ನಿಂದ 7 ಲಕ್ಷ ಜನರಿಗೆ ಲಾಭ ಕಲ್ಪಿಸಲಾಗಿದೆ. ಇದು ನಡೆದಿದ್ದು ಮಧ್ಯಪ್ರದೇಶ ರಾಜ್ಯದಲ್ಲಿ, ಆದರೆ ಅವರು ನಮ್ಮ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದೇ ರಾಜ್ಯದಲ್ಲಿ ನಡೆದ ವ್ಯಾಪಂ ಹಗರಣದ ಬಗ್ಗೆಯೂ ಮಾತನಾಡಲಿ. ಆ ಪ್ರಕರಣದಲ್ಲಿ 48 ಆರೋಪಿಗಳು ಕೊಲೆಯಾದರು. ಇದೇ ಬಿಜೆಪಿ ಸರ್ಕಾರ ರಾಜ್ಯ ಹಾಗೂ ಕೇಂದ್ರದಲ್ಲಿದೆ. ಇದರ ಬಗ್ಗೆ ಯಾರು ಮಾತನಾಡಬೇಕು? ಎಂದು ಪ್ರಶ್ನಿಸಿದರು.
ಕತಾರ್‌ನಲ್ಲಿ ಎಂಟು ಭಾರತೀಯ ಮಾಜಿ ಸೈನಿಕರಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಈ ಮೋದಿ ಸರ್ಕಾರ ಏನು ಮಾಡುತ್ತಿದೆ? ಇಂಥ ಅನೇಕ ಪ್ರಕರಣಗಳಿವೆ. ಅದರ ಬಗ್ಗೆ ಮಾತನಾಡಲಿ, ಮೋದಿ ಸಾಹೇಬರ ಬಗ್ಗೆ ಏನು ಹೇಳೋದು? ಈ ದೇಶಕ್ಕೆ ಅವರೇನು ಮಾಡಿದ್ದಾರೆ ಅಂತಾ ಹೇಳಲಿ. ಅಧಿಕಾರಕ್ಕೆ ಒಂಬತ್ತು ವರ್ಷವಾಯಿತು, ಒಂದು ಪ್ರೆಸ್ ಮೀಟ್ ಮಾಡಿಲ್ಲ. ಪತ್ರಕರ್ತರೇ ಈ ಬಗ್ಗೆ ಅವರಿಗೆ ಒಂದು ಪತ್ರ ಬರೆಯಿರಿ. ಪ್ರೆಸ್ ಮೀಟ್ ಮಾಡಲು ಹೇಳಿ ಎಂದು ಸಚಿವ ಸಂತೋಷ್ ಲಾಡ್ ಮನವಿ ಮಾಡಿಕೊಂಡರು.
ವರ್ಗಾವಣೆಯಲ್ಲಿ 5 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಕುರಿತು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪದ ಬಗ್ಗೆ ಮಾತನಾಡಿದ ಅವರು, ಈ ದೇಶದ ಸಮಸ್ಯೆಗಳ ಬಗ್ಗೆ ಅವರನ್ನು ಕೇಳಿ, ಅವರು ಕೂಡ ಇವುಗಳ ಬಗ್ಗೆ ಮಾತನಾಡಲಿ. ಅವರು ಏನೇನೋ ಹೇಳುತ್ತಿರುತ್ತಾರೆ. ಇಂಥ ಆರೋಪಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಅವುಗಳ ಬಗ್ಗೆ ನಾನೇಕೆ ಉತ್ತರ ಕೊಡಲಿ ಎಂದರು.
2018 ರಲ್ಲಿ ಲಕ್ಷ ಕೋಟಿ ರೂಪಾಯಿ ಟೆಂಡರ್ ಕರೆದಿದ್ದರು ಎಂಬ ಕಾರಜೋಳ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಯಾವತ್ತೂ ಮೂರು ಪಟ್ಟು ಟೆಂಡರ್ ಕರೆದಿಲ್ಲ. ಇವುಗಳನ್ನು ನೀವೇ ಚೆಕ್ ಮಾಡಿ. ಹಿಂದಿನ ಸರ್ಕಾರದ ಎಷ್ಟು ಬಿಲ್ ಪೆಂಡಿಂಗ್ ಇವೆ? ನೋಡಿ ಅವುಗಳನ್ನು ಅವರೇ ಸರಿಯಾಗಿ ಚೆಕ್ ಮಾಡಲಿ. ಎಲ್ಲವನ್ನು ಬರೆದುಕೊಂಡು ಬಂದು ಹೇಳಲಿ. ಸಂಬಂಧಿಸಿದ ಖಾತೆಗಳ ಸಚಿವರು ಅದಕ್ಕೆ ಉತ್ತರಿಸುತ್ತಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕೇಳಲಿ ಎಂದು ಕಾರಜೋಳ ಅವರಿಗೆ ಲಾಡ್ ಚರ್ಚೆಗೆ ಸಚಿವರು ಆಹ್ವಾನ ನೀಡಿದರು.
ಕೃಷಿ ವಿವಿ ಜಾನುವಾರುಗಳ ಲೀಲಾವು (ಹರಾಜು) ವಿಚಾರಕ್ಕೆ ಮಾತನಾಡಿದ ಅವರು, ಲೀಲಾವಿನಲ್ಲಿ ಪಡೆದು ಕಸಾಯಿಖಾನೆಗೆ ಸೇರಿಸುತ್ತೀರಿ ಎಂಬ ಬಜರಂಗದಳದ ಆರೋಪ ಕುರಿತು ಮಾತನಾಡಿ, ಭಾರತ ಬೀಫ್ ರಫ್ತಿನಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನ ಭಾರತಕ್ಕೆ ಇದೆ. ಯುಪಿ, ಮಧ್ಯಪ್ರದೇಶ, ಛತ್ತಿಸ್ಗಢ, ಮಹಾರಾಷ್ಟ್ರ, ಕರ್ನಾಟಕ ಸೇರಿ ಎರಡನೇ ಸ್ಥಾನದಲ್ಲಿದ್ದೇವೆ. ಇದರ ಶ್ರೇಯಸ್ಸು ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಕಸಾಯಿಖಾನೆಗೆ ಬೇಡ ಅಂತಾರೆ. ಹಾಗಾದರೆ ದೇಶಾದ್ಯಂತ ಗೋಶಾಲೆ ತೆರೆದು, ಸಾಕಲಿ. ಬೀಫ್ ರಫ್ತು ಬ್ಯಾನ್ ಮಾಡಿ ಗೋವಾ, ಮಣಿಪುರದಲ್ಲಿ ಬೀಫ್ಗೆ ಅವಕಾಶ ಕೊಟ್ಟಿದ್ದೀರಿ ಎಂದರು.
ಚುನಾವಣೆ ಹತ್ತಿರ ಬಂದಿದೆ ಹಾಗಾಗಿ ಏನೇನೋ ವಿಷಯ ತರುತ್ತಿದ್ದಾರೆ. ಬಿಹಾರದಲ್ಲಿ ಒಂದು ವಾರದಲ್ಲಿ 8.5 ಲಕ್ಷ ಶೌಚಾಲಯ ಕಟ್ಟಿಸಿದ್ದೇವೆ ಎಂದಿದ್ದಾರೆ. ಇದನ್ನು ಒಪ್ಪಲು ಸಾಧ್ಯವಾ? ಇರದೇ ಇರೋ ರೈಲ್ವೆ ನಿಲ್ದಾಣಗಳ ಪ್ರಸ್ತಾಪ ಮಾಡಿದ್ದಾರೆ. ರಾಣಿ, ದುರ್ಗಾ, ದೇವಿ ಸ್ಟೇಷನ್ ಎಂದಿದ್ದಾರೆ. ಆ ಸ್ಟೇಷನ್ಗಳು ಭಾರತದಲ್ಲಿಯೇ ಇಲ್ಲ. ಆದರೂ ಪಿಕ್ಚರ್ ನಡಿತಾ ಇದೆ, ನಡೆಯಲಿ. ಬಜರಂಗ ದಳ ಈಗ ಆರೋಪ ಮಾಡುತ್ತಿದೆ. ಇವರು ಎಷ್ಟು ಗೋವು ಸಾಕಿದ್ದಾರೆ. ಇಸ್ಕಾನ್ ಬಗ್ಗೆ ಮೇನಕಾ ಗಾಂಧಿ ಆರೋಪ ಮಾಡಿದ್ದರು. ಇದರ ಬಗ್ಗೆ ಯಾರು ಉತ್ತರ ಕೊಡಬೇಕು? ಅವರು ಯಾವುದಕ್ಕೂ ಉತ್ತರ ಕೊಡುತ್ತಿಲ್ಲ. ಎಲ್ಲದಕ್ಕೂ ನಾವೇ ಉತ್ತರ ಕೊಡಬೇಕಾಗಿದೆ. ಗೋವುಗಳ ಬಗ್ಗೆ ಪ್ರೀತಿ ಇರೋರು ತಾವೇ ಗೋಶಾಲೆಗೆ ಒಯ್ಯಲಿ ಎಂದರು.
ಇದನ್ನೂ ಓದಿ: ಜೆಡಿಎಸ್ ಎನ್‌ಡಿಎಗೆ ಆ ಪಕ್ಷದ ಕಾರ್ಯಕರ್ತರು 'ಇಂಡಿಯಾ'ಗೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ